ಹಾಸನ: ವ್ಹೀಲಿಂಗ್ ಮಾಡುವವರ ತಡೆದು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಘರ್ಷಣೆ ಉಂಟಾಗಿ ಕೊನೆಯಲ್ಲಿ ವ್ಹೀಲಿಂಗ್ ಮಾಡಿದವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದು ಜನತೆ ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸನ ನಗರ ಮತ್ತು ಸುತ್ತ ಮುತ್ತ ವ್ಹೀಲಿಂಗ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಆದರೆ ಇದನ್ನು ನಿಯಂತ್ರಣ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಲಾಗಿದೆ.
ನೆನ್ನೆ ರಾತ್ರಿ ಗಂಟೆ ೮ ಗಂಟೆ ಸಮಯದಲ್ಲಿ ಹಾಸನ ನಗರದ ೮೦ ಫೀಟ್ ರಸ್ತೆ ನಿವಾಸಿ ಸುಮಂತ (೨೦) ಆಟೋ ಚಾಲಕನಾಗಿದ್ದು, ತನ್ನ ಬೈಕ್ ತೆಗೆದುಕೊಂಡು ಮನೆಯಿಂದ ಹೊರಗೆ ಬಂದಿದ್ದು, ನಗರದ ಗವೇನಹಳ್ಳಿ ಬಳಿ ವ್ಹೀಲಿಂಗ್ ಮಾಡುತ್ತಿದ್ದು, ಇದನ್ನು ಕಂಡ ಗವೇನಹಳ್ಳಿ ಗ್ರಾಮದ ಕೆಲ ಯುವಕರು ತಡೆದು ವ್ಹೀಲಿಂಗ್ ಮಾಡದಂತೆ ಯವಕ ಸುಮಂತ್‌ಗೆ ತಿಳಿಮಾತು ಹೇಳಲಾಗಿತ್ತು. ವ್ಹೀಲಿಂಗ್ ಮಾಡುತ್ತಿದ್ದ ವ್ಯಕ್ತಿ ಹಾಗೂ ಯುವಕರ ನಡುವೆ ಸಲ್ಪ ಮಾತುಕತೆ ನಡೆದಿದೆ. ಈ ವೇಳೆ ಸ್ಥಳೀಯರು ಮಧ್ಯ ಪ್ರವೇಶ ಮಾಡಿ ಎರಡು ಕಡೆಯವರನ್ನು ಸಮಾಧಾನ ಮಾಡಿ ಕಳುಹಿಸಲಾಗಿತ್ತು.
ವೀಲಿಂಗ್ ಮಾಡುವ ಸುಮಂತ್ ವಾಪಸ್ ಹೊರಟು ಹೋಗಿ ಕೆಲ ಸಮಯದಲ್ಲಿಯೇ ಮತ್ತೆ ವಾಪಸ್ ತನ್ನ ಜೊತೆ ಇಬ್ಬರನ್ನು ಕರೆದುಕೊಂಡು ಬಂದಿದ್ದು, ಇವರ ಕೈಲಿ ಲಾಂಗು, ಚಾಕು ತಂದು ತನ್ನ ವಿರುದ್ದ ಗಲಾಟೆ ಮಾಡಿದವರ ವಿರುದ್ದ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಚಾಕು ಮತ್ತು ಲಾಂಗ್ ಎರಡನ್ನು ಅವರಿಂದ ಕಸಿದುಕೊಂಡ ಗವೇನಹಳ್ಳಿ ಗ್ರಾಮದ ಪ್ರಜ್ವಲ್ ಮತ್ತು ಇತರ ಯುವಕರು ಸೇರಿ ಆಟೋ ಚಾಲಕ ಸುಮಂತ್ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದು, ಈ ವೇಳೆ ಕೆಳಗೆ ಕುಸಿದು ಬಿದ್ದ ಸುಮಂತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ಗಾಯಗೊಂಡಿದ್ದ ಸುಮಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದರು. ಈ ಬಗ್ಗೆ ಸುಮಂತ ತಂದೆ ನಿಂಗರಾಜು ನೀಡಿದ ದೂರಿನ ಮೇರೆಗೆ ಹಾಸನ ನಗರ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.