ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ವೃದ್ದೆಯನ್ನು ಅಮಾನುಷ ಅತ್ಯಾಚಾರ-ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಈ ಪ್ರಕರಣ ಸಂಬಂಧ ಅರಸೀಕೆರೆ ತಾಲೂಕು ಕಣಕಟ್ಟೆ ಹೋಬಳಿ ಯರೇಹಳ್ಳಿ ಗ್ರಾಮದ ಮಿಥುನ್ ಕುಮಾರ್ (32) ಎಂಬುವರನ್ನು ಬಂಧಿಸಲಾಗಿದೆ ಎಂದರು.
ಪ್ರಕರಣದಲ್ಲಿ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ವೃದ್ದೆ ಗೌರಮ್ಮ(85) ಕೊಲೆಯಾದ ದುರ್ದೈವಿಯಾಗಿದ್ದು, ವೃದ್ಧೆ ಏ.1ರಂದು ಮಧ್ಯಾಹ್ನ ತನ್ನ ಜಮೀನಿನ ಬಳಿ ತೆರಳಲು ಹೋಗಿ ದಾರಿ ಗೊತ್ತಿಲ್ಲದೆ ಬೇರೆ ಕಡೆ ಹೋಗಿದ್ದ ಅಜ್ಜಿಯನ್ನು ಬಿಟ್ಟು ಬರುವುದಾಗಿ ಬೈಕಿನಲ್ಲಿ ಕರೆದೊಯ್ದ ಆರೋಪಿ ಮಿಥುನ್ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾನೆ. ಈ ವೇಳೆ ಪ್ರತಿರೋಧ ತೋರಿದ ವೃದ್ಧೆಯನ್ನು ಬರ್ಬರವಾಗಿ ಹತ್ಯೆಗೈದ ಬಳಿಕ ರಾಕ್ಷಸ ಕೃತ್ಯ ಎಸಗಿದ್ದಾನೆ.
ವೃದ್ಧೆಯನ್ನು ಕೊಂದು ಅತ್ಯಾಚಾರ ಎಸಗಿದ ಮಿಥುನ್ ಕುಮಾರ್ ಪ್ರಕರಣ ಸಂಬಂಧ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ. ಏಪ್ರಿಲ್ 2ರಂದು ಗೌರಮ್ಮ ಅವರ ಪುತ್ರ ಮಲ್ಲಿಕಾರ್ಜುನ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿ ತನಿಖೆ ಕೈಗೊಂಡ ಬಳಿಕ ಅಮಾನುಷ ಘಟನೆ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದರು.
ಐದು ವರ್ಷದ ಹಿಂದೆ ಇದೇ ರೀತಿಯಲ್ಲಿ ಓರ್ವ ವೃದ್ದೆಯ ಮೇಲೆ ಅತ್ಯಾಚಾರ ಯತ್ನವನ್ನು ಮಾಡಿದ್ದ ಮಿಥುನ್, ಇದೀಗ ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗಿದ್ದು ಈತನ ವಿರುದ್ಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.