ಹಾಸನ: ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ದಾಸರ ಕೊಪ್ಪಲು ಗ್ರಾಮದ ಪುಲ್ಲಿ ಉರುಫ್ ಸಂತೋಷನನ್ನು ಆತನ ಸ್ನೇಹಿತರೇ ಟ್ರಿಪ್‌ಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಹೂತು ಹಾಕಿದ್ದ ಪ್ರಕರಣ ಪತ್ತೆ ಹಚ್ಚುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಎಸ್‌ಪಿ ಕೆ.ಎಸ್. ತಮ್ಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ರಂಗೋಲಿ ಹಳ್ಳ ನಿವಾಸಿ ಪ್ರೀತಂ(೨೫), ಮತ್ತು ಹೇಮಾವತಿ ನಗರ ನಿವಾಸಿ ಕೀರ್ತಿ(೨೪) ಎಂಬ ಇಬ್ಬರನ್ನು ಬಂಧಿಸಲಾಗಿದೆ. ಪುಲ್ಲಿ ನಾಪತ್ತೆಯಾಗಿದ್ದ, ಆತನನ್ನು ಕರೆದೊಯ್ದಿದ್ದ ಕೀರ್ತಿ ಕೂಡ ಯಾರ ಸಂಪರ್ಕಕ್ಕೂ ಸಿಗದೆ ಓಡಾಡುತ್ತಿದ್ದ. ಇತ್ತ ಕಾಣೆಯಾದ ಪುಲ್ಲಿ ಉರುಫ್ ಸಂತೋಷ್ ತಂದೆ ಮಗನ ನಾಪತ್ತೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಹತ್ತು ದಿನದ ಹಿಂದೆ ಕುಡಿತದ ಮತ್ತಿನಲ್ಲಿ ಅಪರಾದಿ ಪ್ರೀತಂ, ಹಾಗೂ ಕೀರ್ತಿ ಇಬ್ಬರು ಕೂಡ ಪುಲ್ಲಿ ಕೊಲೆ ವಿಷಯ ಬಾಯಿ ಬಿಟ್ಟಿದ್ದರು.
ಈ ಸುದ್ದಿ ಪೊಲೀಸರನ್ನು ತಲುಪಿ ಬಳಿಕ ಇಬ್ಬರನ್ನು ಬಂಧಿಸಿ ಪೊಲೀಸ್ ಭಾಷೆ ಉಪಯೋಗಿಸಿದಾಗ ಕೊಲೆ ಪ್ರಕರಣ ಹೊರ ಬಂದಿದೆ. ಫೆಬ್ರವರಿ ೯ರಂದು ನಾಪತ್ತೆಯಾಗಿದ್ದ ಹಾಸನ ನಗರದ ದಾಸರಕೊಪ್ಪಲು ವಾಸಿಯಾಗಿರುವ ರೌಡಿಶೀಟರ್ ಪುಲ್ಲಿ ಅಲಿಯಾಸ್ ಸಂತೋಷ್ ಕೊಲೆಯಾಗಿದ್ದು, ಪುಲ್ಲಿಯನ್ನು ಚಿಕ್ಕಮಗಳೂರು ತಾಲೂಕಿನ ಕುರುವಂಗಿ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಹೂತಿ ಹಾಕಿದ್ದ ಪ್ರಕರಣ ೨೬ ದಿನಗಳ ಬಳಿಕ ಪತ್ತೆಯಾಗಿದೆ.