ಬೇಲೂರು: ಜಮೀನು ವಿಷಯಕ್ಕೆ ಸಂಬಂಧ ಪಟ್ಟಂತೆ ಪೊಲೀಸರೊಬ್ಬರು ಜಮೀನಿನ ಮಾಲೀಕರ ಮಕ್ಕಳು ಹಾಗೂ ತಾಯಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಚಿಕ್ಕಬ್ಯಾಡಿಗೆರೆ ನಿವಾಸಿ ದೇವರಾಜ್‌ರವರು ನಮ್ಮ ಭೂಮಿ ಯಗಚಿ ಮುಳುಗಡೆಯಾಗಿದ್ದು, ನಮಗೆ ಪರ್ಯಾಯವಾಗಿ ಹಳೇಬೀಡು ಸಮೀಪದ ಗೋಣಿಸೋಮನಹಳ್ಳಿ ಮತ್ತು ದಾಸಗೋಂಡನಹಳ್ಳಿ ಬಳಿ ಸರ್ವೆ ನಂ.152ರಲ್ಲಿ 4 ಎಕರೆ ಭೂಮಿಯನ್ನು ನೀಡಿದ್ದಾರೆ. ಕಳೆದ ಹತ್ತು ವರ್ಷದಿಂದಲೂ ನಾವು ಅಲ್ಲಿಯೇ ನಮ್ಮ ತಂದೆ-ತಾಯಿ ಮತ್ತು ಇಬ್ಬರು ಮಕ್ಕಳ ಜೊತೆ ಇದ್ದು, ಭೂಮಿಯಲ್ಲಿ ಬೆಳೆ ಬೆಳೆಯುತ್ತಾ ಅನುಭೋಗದಲ್ಲಿರುವ ಬಗ್ಗೆ ತಿಳಿಸಿದ ಅವರು ನಮ್ಮ ತಂದೆ ಕಳೆದ ವರ್ಷ ನಿಧನ ಹೊಂದಿದ ಬಳಿಕ ಪಕ್ಕ ಭೂಮಿಯ ಪೊಲೀಸ್ ಮಧು ಮತ್ತು ಮೂರ್ತಿ ನಮಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ.
ಈ ಬಗ್ಗೆ ಸಾಕಷ್ಟು ಸಲ ವಿವಾದ ನಡೆದು, ಹಳೇಬೀಡು ಠಾಣೆಯಲ್ಲಿ ವ್ಯಾಜ್ಯವನ್ನು ಬಗೆಹರಿಸಲಾಗಿದೆ. ಅದರೂ ಪೊಲೀಸ್ ಮಧುರವರು ಕಳೆದ ಏಪ್ರಿಲ್ 18ರಂದು ನಾವು ಇಲ್ಲದ ಸಂದರ್ಭದಲ್ಲಿ ನಮ್ಮ ಇಬ್ಬರು ಮಕ್ಕಳಾದ ಪ್ರೀತಮ್ ಮತ್ತು ಸಿದ್ದೇಶ್ ಹಾಗೂ ತಾಯಿ ಸುಶೀಲಮ್ಮನವರ ಮೇಲೆ ಹಲ್ಲೆ ನಡೆಸಿ, ಅವಾಚ್ಯದಿಂದ ಬೈದಿದ್ದಾರೆ. ತೀವ್ರ ಗಾಯಗೊಂಡವರು ಸದ್ಯ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬೇಲೂರು ಠಾಣೆಯಿಂದ ಹಲ್ಲೆ ಬಗ್ಗೆ ಮಾಹಿತಿ ಪಡೆದಿದ್ದು, ನಮಗೆ ನ್ಯಾಯ ಬೇಕು ಎಂದು ಕೇಳಿಕೊಂಡರು.
ಹಲ್ಲೆಗೊಳಗಾದ ಸುಶೀಲಮ್ಮ, ಪ್ರೀತಮ್, ಸಿದ್ದೇಶ ಮಾತನಾಡಿ, ಜಮೀನಿನ ವಿವಾದ ಬಹಳಷ್ಟು ಸಲ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಏ. 18ರ ಮಧ್ಯರಾತ್ರಿ ನಮ್ಮ ಮನೆ ಬಳಿಗೆ ಬಂದ ಪೊಲಿಸ್ ಮಧು ಮತ್ತು ಅವರ ತಮ್ಮ ಮೂರ್ತಿ ಅವರು ಏಕಾಏಕಿ ಪ್ರೀತಮ್ ಮೇಲೆ ಹಲ್ಲೆ ನಡೆಸಿದರು. ಬಳಿಕ ನಾನು ಹೋದ ವೇಳೆ ಇಬ್ಬರ ಮೇಲೆ ಕೂಡ ಮನ ಬಂದಂತೆ ಹಲ್ಲೆ ನಡೆಸಿದಲ್ಲದೇ ನಮ್ಮ ತಾಯಿ ಸುಶೀಲಮ್ಮ ಮೇಲೆ ಹಲ್ಲೆ ಮಾಡಿ ಅವರಿಗೆ ಹೀನಾಯವಾಗಿ ಬೈದಿದ್ದಾರೆ. ರಕ್ಷಣೆ ನೀಡುವ ಪೊಲೀಸರೇ ನಮ್ಮ ಮೇಲೆ ದೌರ್ಜನ್ಯ ನಡೆಸಿದರೆ ನಾವುಗಳು ಯಾರಿಗೆ ದೂರ ಬೇಕು ಎಂದು ತಮ್ಮ ಆಳಲು ಹೇಳಿಕೊಂಡರು. ಈ ಸಂದರ್ಭದಲ್ಲಿ ಸಂಕೇನಹಳ್ಳಿ ಧರ್ಮಣ್ಣ ಹಾಗೂ ಇತರರು ಇದ್ದರು.