ಬೇಲೂರು: ನಗರದ ನೆಹರು ನಗರ ಬಡಾವಣೆಯಲ್ಲಿ ವಾಸವಾಗಿರುವ ರುದ್ರಮ್ಮ ಚಂದ್ರಶೇಖರ ಎಂಬುವವರಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ಬೇಲೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೇಲೂರು ತಾಲೂಕು ಕಸಬಾ ಹೋಬಳಿ ಮುತ್ತುಗನ್ನೆ ಗ್ರಾಮದ ಸರ್ವೆ ನಂ. ೦೭ರಲ್ಲಿ ೧ ಎಕರೆ ೨೦ ಗುಂಟೆ ಜಮೀನನ್ನು ಸುಮಾರು ೩೦ ವರ್ಷದಿಂದಲೂ ಸಾಗುವಳಿ ಮಾಡಿಕೊಂಡು ಬಂದಿದ್ದು, ಹಾಗೂ ಅದೇ ಜಮೀನಿನಲ್ಲಿ ಕೊಳವೆ ಬಾವಿಯನ್ನು ಸಹ ಕೊರೆಯಿಸಿ, ಉಳುಮೆ ಮಾಡಿದಾಗಿನಿಂದಲೂ ಜೋಳ, ಮೆಣಸಿನ ಗಿಡ, ಬದನೆ ಗಿಡ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯುತ್ತಿರುತ್ತಾರೆ. ಆದರೆ ಏಕಾಏಕಿ ಯೋಗೇಶ, ಬಸವರಾಜು, ಆಶಾ, ಜಯಮ್ಮ ಇವರ ಕುಟುಂಬ ಸುಳ್ಳು ದಾಖಲಾತಿ ಸೃಷ್ಠಿಸಿ ನಮ್ಮ ಜಮೀನನ್ನು ತಮ್ಮ ಜಮೀನೆಂದು, ಪಸಲು ಬಂದಿರುವ ಬದನೆಕಾಯಿ ಬೆಳೆಯನ್ನು ನಾಶ ಮಾಡಿ, ನಮ್ಮ ಕುಟುಂಬದ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ ಅಳಲು ತೋಡಿಕೊಂಡಿದ್ದಾರೆ.
ಜೊತೆಗೆ ನಮ್ಮ ಜಮೀನಿಗೆ ಹೊಂದಿಕೊಂಡಂತೆ ೨೦ ಗುಂಟೆ ಸರ್ಕಾರಿ ಗೋ ಮಾಳವಿದ್ದು, ೩೦ ವರ್ಷದಿಂದಲೂ ನಾನೇ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಕಲಂ ೫೭ರಲ್ಲಿ ಅರ್ಜಿ ಸಹ ಹಾಕಿದ್ದೇನೆ. ಆದರೆ ಮುತ್ತುಗನ್ನೆ ಗ್ರಾಮದ ನಿವಾಸಿ ಬಸವರಾಜುರವರ ಕುಟುಂಬ ಏಕಾಏಕಿ ಮಚ್ಚು ಮತ್ತು ದೊಣ್ಣೆಯಿಂದ ನನ್ನ ಮತ್ತು ಹೆಂಡತಿ, ಮಕ್ಕಳ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಕೂಡಲೇ ಸ್ಥಳೀಯರು ಜಗಳ ಬಿಡಿಸಿ, ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹಲ್ಲೆಗೊಳಗಾದ ರುದ್ರಮ್ಮ ಚಂದ್ರಶೇಖರ್ ಆರೋಪಿಸಿದ್ದಾರೆ.
ಸ್ಥಳಕ್ಕೆ ಬೇಲೂರು ಪೋಲೀಸ್ ಠಾಣಾ ಎ.ಎಸ್.ಐ ಬಸವೇಗೌಡ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕೇಸ್ ದಾಖಲಿಸಿದ್ದಾರೆ. ಚಂದ್ರಶೇಖರ ಹೇಳುವಂತೆ, ನಾನು ೩೦ ವರ್ಷದಿಂದ ಸಾಗುವಳಿ ಮಾಡುತಿದ್ದೇನೆ. ಹಲವಾರು ವರ್ಷದಿಂದ ನಮ್ಮ ಅಣ್ಣನಾದ ರಾಮಯ್ಯ ನನಗೆ ಉಳುಮೆ ಮಾಡುವಂತೆ ಬರೆದು ಕೊಟ್ಟಿದ್ದಾರೆ. ಆದರೆ ನಕಲಿ ದಾಖಲೆ ಸೃಷ್ಠಿಸಿ, ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಬಸವರಾಜು ಪಕ್ಕಾ ಪೋಡು ಮಾಡಿಸಿ ಅವರ ಜಮೀನನ್ನು ಗುರುತಿಸಿಕೊಳ್ಳಲಿ. ಸುಮ್ಮನೆ ನಮ್ಮ ಕುಟುಂಬದ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಹೇಳಿದ್ದಾರೆ.