ಬೇಲೂರು: ಬದುಕಿರುವ ಮಹಿಳೆಯೊಬ್ಬರ ಹೆಸರಿನಲ್ಲಿದ್ದ ಆಸ್ತಿ ಲಪಟಾಯಿಸಲು ಆಕೆಯ ಸಂಬಂಧಿಕರು ಬದುಕಿರುವ ಮಹಿಳೆಯ ಹೆಸರಲ್ಲಿ ಮರಣ ದೃಢೀಕರಣ ಪತ್ರ ಪಡೆದುಕೊಂಡು ಆಕೆಯ ಹೆಸರಿನಲ್ಲಿದ್ದ ಬೆಲೆ ಬಾಳುವ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದ ಪ್ರಕರಣವೀಗ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೇಲೂರಿನಲ್ಲಿ ನಡೆದಿದೆ.
ವಿವರ: ತಾಲೂಕಿನ ಬಂಟೇನಹಳ್ಳಿ ಪಂಚಾಯಿತಿಗೆ ಸೇರುವ ಮುದುಗೆರೆ ಗ್ರಾಮದಲ್ಲಿನ ದಿವಂಗತ ಹುಲೀಗೌಡರ ಪತ್ನಿ ಪಾರ್ವತಮ್ಮ ಅವರ ಹೆಸರಿನಲ್ಲಿದ್ದ 32 ಗುಂಟೆ ಜಮೀನನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಪಾರ್ವತಮ್ಮ ಅವರ ಮೈದುನನ ಮಗ ಪಾರ್ವತಮ್ಮ ಅವರು 10-04-2020 ರಂದು ಅಸುನೀಗಿದ್ದಾರೆಂದು 20-04-2020 ರಂದು ನೋಂದಣಿ ಮಾಡಿಸಿದ್ದಲ್ಲದೆ, 14-10-2020 ರಂದು ಮರಣ ದೃಢೀಕರಣ ಪತ್ರವನ್ನೂ ಪಡೆದಿಟ್ಟುಕೊಂಡಿದ್ದಾನೆ.
ಪಾರ್ವತಮ್ಮ ಅವರಿಗೆ 5 ಜನ ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಆಸ್ತಿ ವಿಭಾಗ ಮಾಡಿಕೊಟ್ಟಿದ್ದರು. ತಮ್ಮ ಜೀವನಾಂಶಕ್ಕೆಂದು 32 ಗುಂಟೆ ಜಮೀನನ್ನು ಇಟ್ಟುಕೊಂಡಿದ್ದರು. ನಂತರ ದೂರದೂರಿನಲ್ಲಿ ಬೇಕರಿ ಮಾಡಿಕೊಂಡಿದ್ದ ಮಕ್ಕಳ ಜೊತೆ ತೆರಳಿದ್ದರು. ತನ್ನದೇ ಆಲೋಚನೆ ಮಾಡಿ ಆಸ್ತಿ ಲಪಟಾಯಿಸಲು ಸೂಕ್ತ ಸಂದರ್ಭಕ್ಕೆ ಕಾಯುತ್ತಿದ್ದ ಮೈದುನನ ಮಗ, ಮೃತಪಟ್ಟಿರುವ ಬಗ್ಗೆ ಮರಣ ದೃಢೀಕರಣ ಪತ್ರ ಪಡೆದಿರುವ ವಿಷಯ 10 ದಿನದ ಹಿಂದೆ ಪಾರ್ವತಮ್ಮ ಕುಟುಂಬದವರಿಗೆ ಗೊತ್ತಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ಪರಿಶೀಲಿಸಿದಾಗ ತಹಶೀಲ್ದಾರ್ ಎನ್.ವಿ ನಟೇಶ್ ಎಂಬುವರು ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ಪಾರ್ವತಮ್ಮ ಮೃತಪಟ್ಟಿದ್ದಾರೆಂದು ಮರಣ ದೃಢೀಕರಣ ಪತ್ರವನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ಆತಂಕಗೊಂಡ ಪಾರ್ವತಮ್ಮನ ಮಗ ಮಲ್ಲೇಶ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪಾರ್ವತಮ್ಮ, ನನ್ನ ಗಂಡ ತೀರಿಕೊಂಡಿದ್ದಾರೆ. ನಮಗಿದ್ದ ಭೂಮಿಯನ್ನು 5 ಜನ ಗಂಡು ಮಕ್ಕಳು, 2 ಜನ ಹೆಣ್ಣು ಮಕ್ಕಳಿಗೆ ಹಂಚಿಕೊಟ್ಟಿದ್ದೇನೆ. ನನ್ನ ಜೀವನಾಂಶಕ್ಕೆಂದು 32 ಗುಂಟೆ ಜಮೀನು ಇಟ್ಟುಕೊಂಡಿದ್ದೇನೆ. ಮೈದುನನ ಮಗ ತನ್ನ ಹೆಸರಿಗೆ ಮಾಡಿಕೊಳ್ಳುವ ಉದ್ದೇಶದಿಂದ ನಾನು ಬದುಕಿದ್ದಾಗಲೇ ಸತ್ತಿದ್ದೇನೆಂದು ದಾಖಲೆ ಪಡೆದಿದ್ದಾನೆ. ವಿಷಯ ಗೊತ್ತಾಗಿ ಪೊಲೀಸರಿಗೆ ನನ್ನ ಮಗನ ಮೂಲಕ ದೂರು ಕೊಟ್ಟಿದ್ದೇವೆಂದು ತಿಳಿಸಿದರು.