ಹಾಸನ: ಸಿಮೆಂಟ್ ಕೊಡಿಸುವುದಾಗಿ ನಂಬಿಸಿ ಖಾತೆಗೆ ಹಣ ವರ್ಗಾಯಿಸಿಕೊಂಡು ಅಪರಿಚಿತನಿಂದ ವಂಚನೆಯಾಗಿರುವ ಘಟನೆ ಕೇರಳಾಪುರದಲ್ಲಿ ನಡೆದಿದೆ. ಕೇರಳಾಪುರದ ಮಂಜುನಾಥ್ ಸಿಮೆಂಟ್ ವ್ಯಾಪಾರ ಮಾಡಲು ಆನ್‌ಲೈನ್‌ನಲ್ಲಿ ಸರ್ಚ್ ಮಾಡುತ್ತಿದ್ದಾಗ ಅಂಬುಜ ಸಿಮೆಂಟ್ ಲಿಮಿಟೆಡ್ ಹೆಸರಿನಲ್ಲಿ ಸಿಕ್ಕಿದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾರೆ. ಅಪರಿಚಿತ ವ್ಯಕ್ತಿ ಸಿಮೆಂಟ್ ನೀಡುವ ಭರವಸೆಯೊಂದಿಗೆ ಕಂಪನಿಯ ನಿಯಮದಂತೆ 25 ಸಾವಿರ ರೂ. ರಿಜಿಸ್ಟ್ರೆಷನ್ ಫೀಸ್ ಮತ್ತು 1 ಲಕ್ಷ ಡಿಪಾಸಿಟ್ ಇಡಬೇಕೆಂದು ಹಾಗು ಕನಿಷ್ಟ 1,500 ಚೀಲ ಸಿಮೆಂಟ್ ಖರೀದಿಸಬೇಕೆಂದು ತಿಳಿಸಿದ್ದಾರೆ. ವ್ಯವಹಾರದ ಮಾಹಿತಿಗಳನ್ನು ವಾಟ್ಸಪ್ ಮೂಲಕ ಅಪರಿಚಿತ ವ್ಯಕ್ತಿ ನೀಡಿದರು.
ಕೆನರಾ ಬ್ಯಾಂಕ್‌ನ ಖಾತೆ ಸಂಖ್ಯೆಯಿಂದ ಅಂಬುಜ ಸಿಮೆಂಟ್ ಲಿಮಿಟೆಡ್‌ನ ಖಾತೆ ಸಂಖ್ಯೆಗೆ ನೆಫ್ಟ್ ಮೂಲಕ 1 ಲಕ್ಷ 25 ಸಾವಿರ ರೂ. ಗಳನ್ನು ವರ್ಗಾವಣೆ ಮಾಡಿದ್ದಾರೆ. ಕೆನರಾ ಬ್ಯಾಂಕ್ ಖಾತೆಯಿಂದ ಅಂಬುಜ ಸಿಮೆಂಟ್ ಲಿಮಿಟೆಡ್‌ನ ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಒಂದು ಬಾರಿ 2,41,840 ರೂ. ಹಾಗೂ ಇನ್ನೊಂದು ಬಾರಿ 2,86,840 ರೂ. ಗಳನ್ನು ವರ್ಗಾವಣೆ ಮಾಡಿದ್ದು, ಒಟ್ಟು 6,53,680 ರೂ.ಗಳನ್ನು ಅಪರಿಚಿತ ವ್ಯಕ್ತಿಯು ಮೋಸದಿಂದ ವರ್ಗಾವಣೆ ಮಾಡಿಸಿಕೊಂಡಿದ್ದು, ಸಿಮೆಂಟ್ ಕೊಡದೇ ಹಾಗೂ ಹಣವನ್ನು ವಾಪಸ್ ಕೊಡದೇ ವಂಚಿಸಲಾಗಿದೆ. ಹಾಸನದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.