ಹಾಸನ: ಬೇಲೂರು ತಾಲೂಕಿನ ಹಳೇಬೀಡು ಹೊರ ವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿರುವ ಅಕ್ರಮ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇಲೂರು ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ನೀಡಿರುವ ದೂರಿನ ಮೇರೆಗೆ ವಸತಿ ನಿಲಯದ ಪ್ರಾಂಶುಪಾಲೆ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಐವರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ನಡೆದಿರುವ ದೌರ್ಜನ್ಯ ಕುರಿತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಸತಿ ನಿಲಯಕ್ಕೆ, ಸ್ಥಳೀಯ ಶಾಸಕರು, ಪೊಲೀಸರು, ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಹಲವು ವಿದ್ಯಾರ್ಥಿಗಳು ತಮಗಾದ ದೌರ್ಜನ್ಯ ಕುರಿತು ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಮುಂದೆ ಹೇಳಿಕೆ ದಾಖಲು ಮಾಡಿರುವ ಬೆನ್ನಲ್ಲೇ ಐವರನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ವಸತಿ ನಿಲಯದ ಎಂಟು ವಿದ್ಯಾರ್ಥಿನಿಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಯತ್ನವಾಗಿದೆ ಎಂದು ದೂರು ನೀಡಿದ್ದಾರೆ. ೧೦ನೇ ತರಗತಿಯ ೩ ಹಾಗೂ ೭ನೇ ತರಗತಿಯ ೫ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಕುರಿತು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದ ಅವರು ಈ ಹಿನ್ನಲೆಯಲ್ಲಿ ದೂರಿನ ಅನ್ವಯ ಎಸ್.ಸಿ.ಎಸ್.ಟಿ ಕಾಯ್ದೆ ಹಾಗೂ ಚೈಲ್ಡ್ ಪ್ರೊಟೆಕ್ಷನ್ ಆಕ್ಟ್ ಅಡಿ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.
೩೦೦ ವಿದ್ಯಾರ್ಥಿಗಳಿಗೆ ದಿನಕ್ಕೆ ಒಂದು ಕೆ.ಜಿ.ಬೇಳೆ, ಒಂದು ಲೀಟರ್ ಎಣ್ಣೆ, ಒಂದು ಲೀಟರ್ ಹಾಲು, ಮೂರು ಲೀಟರ್ ಮೊಸರಿನಲ್ಲಿ ಎಲ್ಲಾ ಮಕ್ಕಳಿಗೆ ಊಟ, ಸೇರಿದಂತೆ ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಕುರಿತು ಪೊಲೀಸರು ಸಂಕ್ಷಿಪ್ತವಾಗಿ ತನಿಖೆ ಆರಂಭಿಸಿದ್ದು, ಈಗಾಗಲೇ ಪ್ರಾಂಶುಪಾಲೆ ಗೀತಾ ಬಾಯಿ, ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಪುನೀತ್, ಶಿಕ್ಷಕ ಶಿವಯ್ಯ, ಅಟೆಂಡರ್ ಶೃತಿ, ಹಾಗೂ ಗಣಿತ ಶಿಕ್ಷಕ ವಿಜಯ್ ಕುಮಾರ್ ಎಂಬುವವರ ಮೇಲೆ ದೂರು ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಗಂಡ-ಹೆಂಡತಿ ಸೇರಿ ವಸತಿ ಶಾಲೆಯ ಸಂಪನ್ಮೂಲ ನುಂಗಿ ಕೋಟಿ ಬಂಗಲೆ ಕಟ್ಟಿಸಿದರಾ..?
ಇನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದ ಪ್ರಾಂಶುಪಾಲೆ ಗೀತಾಬಾಯಿ ಹಾಗೂ ಆಕೆಯ ಪತಿ ಕೂಡ ಇದೇ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಮಕ್ಕಳಿಗೆ ದೊರೆಯ ಬೇಕಾದ ಎಲ್ಲಾ ಸವಲತ್ತುಗಳನ್ನು ಇಬ್ಬರು ಸೇರಿ ನುಂಗಿ ನೀರು ಕುಡಿದಿದ್ದಾರೆ. ಇಲ್ಲಿಯ ಸಂಪನ್ಮೂಲ ಬಳಸಿಕೊಂಡು ಇಬ್ಬರು ಎರಡು ಕೋಟಿ ಬೆಲೆ ಬಾಳುವ ಮನೆ ಕಟ್ಟಿಸುತ್ತಿದ್ದಾರೆಂಬ ಮಾತುಗಳು ಈಗ ಕೇಳಿ ಬಂದಿದೆ.
೧೦೯೮ ಕರೆ ಮಾಡಲು ಮನವಿ
ಶಾಲಾ-ಕಾಲೇಜು ಸೇರಿದಂತೆ ಎಲ್ಲಿಯೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರ ಪ್ರಕರಣಗಳು ಇದ್ದಲ್ಲಿ ೧೦೯೮ ಸಂಖ್ಯೆಗೆ ಕರೆ ಮಾಡುವ ಮೂಲಕ ರಕ್ಷಣೆ ಪಡೆಯಬಹುದಾಗಿದೆ ಹಾಗೂ ಸ್ಥಳೀಯ ಪೊಲೀಸ್ ಠಾಣೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಪೊಲೀಸ್ ಇಲಾಖೆಗೆ ಈ ಕುರಿತು ಯಾವುದೇ ದೂರುಗಳು ಬಂದರೂ ದೂರುದಾರರ ಮಾಹಿತಿ ಬಹಿರಂಗಪಡಿಸದೆ ತನಿಖೆ ನಡೆಸಲಾಗುವುದು ಎಂದು ಎಸ್.ಪಿ ತಿಳಿಸಿದರು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ
ವಸತಿ ನಿಲಯದಲ್ಲಿ ಅಕ್ರಮವಾಗಲು, ದೌರ್ಜನ್ಯವಾಗಲು ಐವರು ನೇರ ಕಾರಣವೆಂದು ವಿದ್ಯಾರ್ಥಿಗಳು ದೂರಿದ್ದಾರೆ. ಆದರೆ ಹಾಸನ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ ಮಾತ್ರ ಅಡುಗೆ ಸರಿಯಾಗಿ ಮಾಡಿಲ್ಲದ ನೆಪವೊಡ್ಡಿ ವಸತಿ ನಿಲಯದಲ್ಲಿ ಕೆಲಸ ಮಾಡುತ್ತಿದ್ದ ಹಲವು ಗುತ್ತಿಗೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿದ್ದಾರೆ. ಪ್ರಾಂಶುಪಾಲೆ ಗೀತಾಬಾಯಿ ಮತ್ತಾಕೆಯ ಪತಿ ಸೇರಿದಂತೆ ಹಲವರು ಮಾಡಿದ ತಪ್ಪಿಗೆ ತಪ್ಪೇ ಮಾಡದ ಹೊರ ಗುತ್ತಿಗೆ ನೌಕರರು ಶಿಕ್ಷೆ ಅನುಭವಿಸುವಂತಾಗಿದೆ.
ಮೊದ ಮೊದಲು ಪ್ರಾಂಶುಪಾಲರನ್ನು ರಜೆ ಮೇಲೆ ತೆರಳಲು ಸೂಚಿಸಿದ್ದ ಮಂಜುನಾಥ ಪ್ರಕರಣದ ಗಂಭೀರತೆ ಹೆಚ್ಚಾದಂತೆ ಅವರ ಅಮಾನತಿಗೆ ಶಿಫಾರಸ್ಸು ಮಾಡಿದ್ದಾರೆಂದು ಹೇಳಲಾಗುತ್ತಿದೆ.