ಹಾಸನ: ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬೆಳೆಯಲು ಮೊದಲು ಸಮುದಾಯದವರು ಒಗ್ಗಟ್ಟು ಪ್ರದರ್ಶಿಸಬೇಕೆಂದು ಡಾ. ಬಿ.ಆರ್. ಅಂಬೇಡ್ಕರ್ ಮರಿಮಗನಾದ ರಾಜರತ್ನ ಅಂಬೇಡ್ಕರ್ ಅಭಿಪ್ರಾಯಪಟ್ಟು ಕರೆ ನೀಡಿದರು.
ಚಿಕ್ಕಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಗುರುವಾರ ರಾತ್ರಿ ವಿಮಾನದ ಮೂಲಕ ಬಾಂಬೆಗೆ ಹೋಗಬೇಕಾಗಿದ್ದು, ಮಾರ್ಗ ಮಧ್ಯೆ ಹಾಸನ ನಗರದಲ್ಲಿ ಸಲ್ಪ ಸಮಯ ಇದ್ದು, ತನ್ನ ತಾತ ಬಂದು ಹೋದ ಸ್ಥಳವನ್ನು ವೀಕ್ಷಣೆ ಮಾಡಿ ಕಣ್ಣು ತುಂಬಿಕೊಂಡರು.
ನಂತರ ಮಾತನಾಡಿದ ಅವರು, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಲು ದಲಿತರು (Dalit Community) ಒಗ್ಗಟ್ಟು ಪ್ರದರ್ಶಿಸುವ ಬಗ್ಗೆ ಯೋಚನೆ ಮಾಡಬೇಕು. ಮೌಢ್ಯತೆಯಿಂದ ಮೊದಲು ಹೊರಗೆ ಬರಬೇಕು. ಯಾವ ಸ್ಥಳದಲ್ಲಿ ಅವಮಾನವಾಗುತ್ತದೆ ಆ ಜಾಗದಲ್ಲಿ ಸಮುದಾಯದವರು ಯಾರು ಇರಬಾರದು. ನಿಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ ಪಡೆದು ಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಡಾ. ಬಿ.ಆರ್. ಅಂಬೇಡ್ಕರ್ ಭಾರತದಲ್ಲಿ ಮಾತ್ರವಲ್ಲ ಇಡೀ ಪ್ರಪಂಚದ 128 ದೇಶಗಳಲ್ಲಿ ಮಾತನಾಡಿಕೊಳ್ಳುವುದಲ್ಲದೇ ಕಾರ್ಯಕ್ರಮ ಹಮ್ಮಿಕೊಂಡು ನಮ್ಮ ಸಂವಿಧಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆ ಇಂಡಿಯಾದಲ್ಲಿ ಸಮಯ ಇಲ್ಲದಿದ್ದರೂ ಇಲ್ಲಿ ಕೆಲಸ ಮಾಡಬೇಕಾಗಿದೆ. ಅಂಬೇಡ್ಕರ್ ಅವರಿಗೆ ನಾವು ಹಿಂಬಾಲಕರು ಎಂದು ಹೇಳುವುದರಿಂದ ಯಾವ ಪ್ರಯೋಜನವಿಲ್ಲ. ಅವರ ತತ್ವ ಸಿದ್ಧಾಂತದಂತೆ ಎಲ್ಲಾ ಕ್ಷೇತ್ರದಲ್ಲಿ ಕಾಲಿಡಲು ಹೇಳಿದಂತೆ ಅನುಸರಿಸಬೇಕು ಎಂದು ಹೇಳಿದರು.
ಬಾಬ ಸಾಹೇಬ್ ಅಂಬೇಡ್ಕರ್ ಅವರು 1954ರಲ್ಲಿ ಈಗಿರುವ ಹಾಸನ ನಗರದ ಬಾಲ ಮಂದಿರಕ್ಕೆ ಭೇಟಿ ಮಾಡಿದ ಹಿನ್ನಲೆಯಲ್ಲಿ ಆ ಸ್ಥಳ ನೋಡಬೇಕೆಂದು ಆಗಮಿಸಿದ್ದರು.
ಹಿಂದೆ ಮಹಾರಾಜರು ಎ.ಕೆ. ಬೋರ್ಡಿಂಗ್ ಎಂದು ನಿರ್ಮಿಸಿಕೊಡಲಾಗಿದ್ದು, ಮಹಾರಾಜ ಮತ್ತು ಅಂಬೇಡ್ಕರ್ ಹೆಸರಲ್ಲಿ ಸ್ಮಾರಕ ಮಾಡಲು ಸರಕಾರ ನಿರ್ಧರಿಸಿ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಇದೆ ವೇಳೆ ಶ್ಲಾಘಿಸಿದರು. ಇದಾದ ಬಳಿಕ ದಲಿತ ಮುಖಂಡರಿಂದ ಕೆಲ ಸಮಸ್ಯೆಗಳನ್ನು ಚರ್ಚೆ ಮಾಡಿ ಅವರಿಂದ ಸಲಹೆ ಪಡೆಯಲಾಯಿತು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಲ್ಲೇಶ, ಗೀತಾ, ದಲಿತ ಮುಖಂಡರಾದ ಕೆ. ಈರಪ್ಪ, ಕೃಷ್ಣದಾಸ, ಅಂಬೂಗ ಮಲ್ಲೇಶ್, ಹೆಚ್.ಕೆ. ಸಂದೇಶ, ನಾಗರಾಜು ಹೆತ್ತೂರ, ರಾಜೇಶ, ರಂಗಸ್ವಾಮಿ, ಪ್ರಕಾಶ ಇತರರು ಉಪಸ್ಥಿತರಿದ್ದರು.