ಹಾಸನ: ೯೮ ಜಾತಿ ಒಳಗೊಂಡಿರುವ ವಿಶ್ವಕರ್ಮ ಸಮುದಾಯಕ್ಕೂ ಪ್ರತ್ಯೇಕ ಒಳ ಮೀಸಲಾತಿ ನೀಡಬೇಕೆಂದು ಜಿಲ್ಲಾ ವಿಶ್ವಕರ್ಮ ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಆರ್. ನಾಗೇಶ್ ಮತ್ತು ಸಮಾಜದ ಪ್ರಧಾನ ಕಾರ್ಯದರ್ಶಿ ರಾಘವಾಚಾರ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ವಿಶ್ವಕರ್ಮ ಸಮುದಾಯವು ೨ಎ ಗುಂಪಿಗೆ ಸೇರಿದ್ದು, ಇದರಲ್ಲಿ ಸುಮಾರು ೯೮ ಜಾತಿಗಳು ಒಳಗೊಂಡಿದ್ದು, ಸಮಾಜವು ಆರ್ಥಿಕವಾಗಿ ಹಿಂದುಳಿದ ಜನಾಂಗವಾಗಿದೆ. ಅನೇಕರು ವಿದ್ಯಾಭ್ಯಾಸ, ನೌಕರಿ, ವಂಚಿತರಾಗಿದ್ದಾರೆ ಎಂದರು. ವರ್ಗಿಕರಣ ಮೀಸಲಾತಿಯಂತೆ ವಿಶ್ವಕರ್ಮ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ಸರ್ಕಾರ ಘೋಷಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಮಾಜದ ಸ್ವಾಮೀಜಿಗಳು, ಮುಖಂಡರು, ಸಮಾಜದ ಎಲ್ಲಾ ಸಂಘ ಸಂಸ್ಥೆಗಳು ಹೋರಾಟ ಮಾಡುವುದು ಅನಿವಾರ್ಯವಾಗಿರುತ್ತದೆ. ನಮ್ಮ ಸಮಾಜದ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ವಿಶ್ವಕರ್ಮರು ಪಂಚ ಕುಲ ಕಸುಬುದಾರರಾಗಿ, ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದು, ನಮ್ಮ ಸಮಾಜಕ್ಕೆ ಸರ್ಕಾರಿ ನೌಕರಿಗಳು ವರ್ಷಕ್ಕೆ ಕೇವಲ ಶೇಕಡ ೧ ಪರ್ಸೆಂಟ್ ರಷ್ಟು ಸೀಮಿತವಾಗಿದೆ. ಪುರಾತನ ಕಾಲದಿಂದಲೂ ವಿಶ್ವಕರ್ಮರ ಕೊಡುಗೆ ಜಗತ್ಪ್ರಸಿದ್ದವಾಗಿದೆ. ಕರ್ನಾಟಕದಲ್ಲಿ ಸುಮಾರು ೪೦ ಲಕ್ಷ ಜನಸಂಖ್ಯೆ ಹೊಂದಿರುವ ನಮ್ಮ ಸಮಾಜದ ಎಷ್ಟೋ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು, ಅನುದಾನಗಳು ಸಿಗುತ್ತಿಲ್ಲವಾದ್ದರಿಂದ ಇನ್ನು ಮುಂದಾದರೂ ಸರ್ಕಾರಗಳು ನಮ್ಮ ಸಮುದಾಯಕ್ಕೆ ಹೆಚ್ಚಿನ ರೀತಿಯಲ್ಲಿ ಗಮನ ಹರಿಸಿ ನ್ಯಾಯಯುತವಾಗಿ ಒಳಮೀಸಲಾತಿಯನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಚುನಾವಣೆ ಹೊಸ ಹಿನ್ನಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದು, ಮುಂದೆ ಯಾವ ಸರಕಾರ ಬಂದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಇಲ್ಲವಾದರೆ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ, ಗಾಯಿತ್ರಿ ಮಹಿಳಾ ಮಂಡಳಿ ಅಧ್ಯಕ್ಷೆ ಅನಿಲ ಪದ್ಮನಾಭ, ರಾಘವೇಂದ್ರ, ಇತರರು ಉಪಸ್ಥಿತರಿದ್ದರು.