ಬೇಲೂರು: ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಕಬ್ಬಿನ ಮನೆ ಕಾಲೂನಿಯಲ್ಲಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಇಲ್ಲಿನ ಕೆಲವರು ಕಿರುಕುಳ ನೀಡುತ್ತಿದ್ದಾರೆ ಎಂಬ ಸುದ್ದಿ ಕೆಲ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆ, ನಗರದ ಹೊಸ ನಗರ ಚರ್ಚ್‌ನಲ್ಲಿ ತಾಲೂಕು ಕ್ರೈಸ್ತ ಹಿತ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ.
ಇದೇ ಸಂದರ್ಭದಲ್ಲಿ ತಾಲೂಕು ಕ್ರೈಸ್ತ ಹಿತರಕ್ಷಣಾ ಸಮಿತಿ ಹಿರಿಯ ಸಭಾ ಪಾಲಕ ಸಿ.ಎಸ್ ಬಿಸೆಪ್ ಜೋಸೆಪ್ ಮಾತನಾಡಿ, ಕ್ರಿಶ್ಚಿಯನ್ ಪಾದ್ರಿಗಳು ಹಿಂದೂಗಳನ್ನು ಮತಾಂತರ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಇತ್ತೀಚಿಗೆ ಸೋಷಿಯಲ್ ಮೀಡಿಯಾ, ವಾಟ್ಸಪ್ ಗಳಲ್ಲಿ ಹರಿದಾಡಿದ ಹಿನ್ನೆಲೆ, ನಾವು ಯಾರಿಗೂ ಬೆದರಿಕೆ ಹಾಕಿಲ್ಲ ಹಾಗೂ ಕಿರುಕುಳ ನೀಡಿಲ್ಲ. ಇದು ಸುಳ್ಳು ಆರೋಪವೆಂದು ತಾಲೂಕು ಕ್ರೈಸ್ತ ಹಿತರಕ್ಷಣಾ ಸಮೀತಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ತಾಲೂಕಿನಲ್ಲಿ ಎಲ್ಲೂ ಕೂಡ ಮತಾಂತರ ಕ್ರಿಯೆ ನಡೆದಿಲ್ಲ. ಪತ್ರಿಕೆ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದದ್ದು ಎಂದರು. ತಾಲೂಕು ಕ್ರೈಸ್ತ ಹಿತ ರಕ್ಷಣಾ ಸಮಿತಿ ಅದ್ಯಕ್ಷ ಜೋಹಿಲ್ ಕುಮಾರ್ ಮಾತನಾಡಿ, ಕಳೆದ ಕೆಲ ಹಿಂದೆಯಷ್ಟೆ ಚಿಕ್ಕಯ್ಯ(ಫಾಸ್ಟರ್) ಎಂಬ ಸಭಾ ಪಾಲಕ ಕಬ್ಬಿನ ಮನೆ ಗ್ರಾಮದಲ್ಲಿ ಸೇವೆ ಮಾಡುತ್ತಿರುವಾಗ ಅವರ ಮೇಲೆ ವೈಯಕ್ತಿಕ ದ್ವೇಷದ ಹಿನ್ನೆಲೆ ಯಾರೋ ಕಾಣದ ಕೈಗಳು ಸುಳ್ಳು ಆರೋಪ ಮಾಡಿ ಪೋಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆದರೆ ಮಾದ್ಯಮ ಮಿತ್ರರು ತಪ್ಪು ಮಾಹಿತಿ ಸಂಗ್ರಹಿಸಿ ಜನರ ಮನಸ್ಸಿನಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡಿರುವುದು ಖಂಡನೀಯ. ಇಂತಹ ಸಂಗತಿಗಳು ಇದುವರೆಗೂ ನಡೆದಿಲ್ಲ.
ತಾಲೂಕು ಕ್ರೈಸ್ತ ಹಿತರಕ್ಷಣಾ ವೇದಿಕೆ 2014ರಿಂದಲೂ ಕೂಡ ತಾಲೂಕಿನ ಮೂಲೆ ಮೂಲೆಯಲ್ಲೂ ಕ್ರೈಸ್ತರ ಮತ್ತು ಇತರರ ಕ್ಷೇಮಾಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಸೆಪಟ್ಟು ಸ್ವ-ಇಚ್ಛೆಯಿಂದ ಬಂದವರಿಗೆ ಪ್ರಾರ್ಥನೆ ಮಾಡುವುದು ಅನಿವಾರ್ಯ. ಯಾವುದೇ ಮತಾಂತರ ಪ್ರಕ್ರಿಯೆ ನಡೆದಿಲ್ಲ. ಕ್ರಿಶ್ಚಿಯನ್ ಧರ್ಮದಲ್ಲಿ ಹಿಂದೂ ದೇವರ ಮೇಲೆ ಅಟ್ಟಹಾಸ ಮೆರೆಯುವ ಅಥವಾ ಹಿಂದೂಗಳಿಗೆ ಮತಾಂತರವಾಗುವಂತೆ ಪ್ರಚೋದನೆ ನೀಡುವಂತಹ ಸಿದ್ದಾಂತ ನಮ್ಮಲ್ಲಿಲ್ಲ. ದಯವಿಟ್ಟು ಸತ್ಯವನ್ನು ಪರಿಶೀಲನೆ ಮಾಡಿ ಜನರಿಗೆ ಒಳ್ಳೆಯ ಸಂದೇಶವನ್ನು ನೀಡುವ ಮೂಲಕ ಪತ್ರಕರ್ತರು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.
ನಾನು ಕಳೆದ 8 ವರ್ಷದಿಂದ ಕಬ್ಬಿನ ಮನೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇಂತಹ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಯಾರನ್ನು ಬಲವಂತವಾಗಿ ಮತಾಂತರ ಮಾಡಲು ಮುಂದಾಗಿಲ್ಲ. ಯಾವುದೋ ವೈಯಕ್ತಿಕ ದ್ವೇಷಕ್ಕೆ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಮತಾಂತರ ಎಂಬ ಹೆಸರಿನಲ್ಲಿ ನನ್ನನ್ನು ತೇಜೋವದೆ ಮಾಡಿ ಹಲವಾರು ಭಾರಿ ಹಲ್ಲೆಗೆ ಮುಂದಾಗಿದ್ದಾರೆ. ಈಗಾಗಲೇ 15 ಕುಟುಂಬಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಆರಾಧನೆ ಮಾಡುವುದನ್ನು ನಿಲ್ಲಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಘಟನೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ನೊಂದ ಚಿಕ್ಕಯ್ಯ (ಫಾಸ್ಟರ್) ಮನವಿ ಮಾಡಿಕೊಂಡಿದ್ದಾರೆ. ಕಾರ್ಯದರ್ಶಿ ಕೃಷ್ಣಮೂರ್ತಿ, ವೆಂಕಟೇಶ, ಗುರುಜಾನ್, ಶಿವಪ್ಪ, ಕೆ.ವಿ.ಮಣಿ, ರೇವಣ್ಣಮೂರ್ತಿ ಇದ್ದರು.