ಹಾಸನ: ಮುಸ್ಲಿಂ ಸಮುದಾಯದ ಒಳ ಮೀಸಲಾತಿಯನ್ನು ಮರು ಜಾರಿ ಮಾಡುವಂತೆ ಜೆಡಿಎಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಸದಸ್ಯ ಸಮೀರ್ ಅಹಮದ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಮೀಸಲಿದ್ದ 4% ಒಳ ಮೀಸಲಾತಿಯನ್ನು ವಾಪಸ್ ಪಡೆದಿರುವುದು ಖಂಡನೀಯವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದಲೂ ಮೀಸಲಾತಿ ಪಡೆಯುತ್ತಿರುವ ಮುಸ್ಲಿಂ ಸಮುದಾಯಕ್ಕೆ ನಗನಗೌಡ ಕಮಿಟಿ ಸೇರಿದಂತೆ ಇತರ ಕಮಿಟಿಯು ಸಹ ಶಿಫಾರಸ್ಸು ಮಾಡಿ ಮೀಸಲಾತಿಯನ್ನು ಜಾರಿ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಮುಸ್ಲಿಂ ಸಮುದಾಯಕ್ಕೆ ನಾಲ್ಕು ಪರ್ಸೆಂಟ್ ಮೀಸಲಾತಿಯನ್ನು ಜಾರಿಗೆ ಕ್ರಮ ಕೈಗೊಂಡಿದ್ದರು ಆದರೆ ಬಿಜೆಪಿ ಸರ್ಕಾರ ದ್ವೇಷ ರಾಜಕೀಯ ಮಾಡುವ ಮೂಲಕ ಮೀಸಲಾತಿಯನ್ನು ವಾಪಸ್ ಪಡೆದಿರುವುದು ಸರಿಯಲ್ಲ ಎಂದರು.
ಸರ್ಕಾರದ ಇಂತಹ ನಿರ್ಧಾರದಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ. ವಿದ್ಯಾವಂತ ಯುವಕರಿಗೆ ಉದ್ಯೋಗ ಪಡೆಯುವಲ್ಲಿ ತೊಂದರೆಯಾಗಿದ್ದು, ಬಿಜೆಪಿ ಸರ್ಕಾರ ಈಗಾಗಲೇ ವಿದ್ಯಾರ್ಥಿಗಳ ಸ್ಟೈಫಂಡ್ ಮತ್ತು ವಕ್ಫ್ ಬೋರ್ಡ್‌ಗೆ ಅಗತ್ಯ ಅನುದಾನವನ್ನು ಕಡಿತಗೊಳಿಸಿದ್ದು, ಇದೀಗ ಒಳ ಮೀಸಲಾತಿಯನ್ನು ವಾಪಸ್ ಪಡೆಯುವ ಮೂಲಕ ಸಮುದಾಯದ ಬೆಳವಣಿಗೆಗೆ ಕುಂಠಿತವಾಗಲು ಕಾರಣವಾಗಿದ್ದಾರೆ ಎಂದು ದೂರಿದರು.
ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ ಮೀಸಲಾತಿಯನ್ನು ಮರು ಜಾರಿ ಮಾಡದೆ ಇದ್ದರೆ ಸಮುದಾಯದ ಮುಖಂಡರೆಲ್ಲಾ ಸೇರಿ ವ್ಯವಸ್ಥಿತವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುವ ಮೂಲಕ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಹ್ಮದ್ ಪಾಷಾ, ಇರ್ಫಾನ್, ರಫೀಕ್, ಫಯಾಜ್ ಪಾಶ ಇದ್ದರು.