ಹಾಸನ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕ್ರಿಶ್ಚಿಯನ್ ಸಮುದಾಯ ಸೇರಿದಂತೆ ಎಸ್ಸಿ/ಎಸ್ಟಿ ಒಳಪಂಗಡಗಳ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಸ್ಪರ್ಧಿಸಲು ಅವಕಾಶ ನೀಡಬೇಕು, ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಲಾಗುವುದು ಎಂದು ದಲಿತ ಮುಖಂಡ ಮರಿ ಜೋಸೆಫ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್ಸಿ/ಎಸ್ಟಿ ಒಳಪಂಗಡಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು, ಸೂಕ್ಷ್ಮ-ಅತಿ ಸೂಕ್ಷ್ಮ ಜಾತಿ ಸಮುದಾಯಗಳು ಇದ್ದು, ಇವರಿಗೆ ಯಾವುದೇ ರಾಜಕೀಯ ಪಕ್ಷಗಳು ಪ್ರಾಶಸ್ತ್ಯ ನೀಡುತ್ತಿಲ್ಲ. ಇದರಿಂದ ಈ ಸಮುದಾಯಗಳು ಅಭಿವೃದ್ಧಿ ಆಗದೆ ಇಂದಿಗೂ ಸಹ ತಳಮಟ್ಟದಲ್ಲೇ ಜೀವನ ನಡೆಸುವಂತಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಬುಡಕಟ್ಟು ಜನಾಂಗದ ಜನರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಈ ಚುನಾವಣೆಯಲ್ಲಿ ಇವರಿಗೆ ಅವಕಾಶ ದೊರೆಯದಿದ್ದ ಪಕ್ಷದಲ್ಲಿ ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವರಾಜ, ರಘು, ರಂಗಸ್ವಾಮಿ, ಮಮತಾ, ರತನ್ ಇದ್ದರು.