ಬೇಲೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೇಲೂರು ವಿಧಾನಸಭೆ ಕ್ಷೇತ್ರಕ್ಕೆ ವೀರಶೈವ ಜನಾಂಗಕ್ಕೆ ಸೇರಿದ ಅಭ್ಯರ್ಥಿಯನ್ನೇ ಘೋಷಣೆ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷ ಚೇತನ್ ಗೆಂಡೆಹಳ್ಳಿ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸ್ವತಂತ್ರ ಪೂರ್ವ ಕಾಲದಿಂದಲೂ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡದೆ ವಂಚಿಸಿದ್ದಾರೆ. ನಮ್ಮ ವೀರಶೈವ ಲಿಂಗಾಯತ ಜನಾಂಗದವರು ತಾಲೂಕಿನಾದ್ಯಂತ ೬೮ ಸಾವಿರ ಮತದಾರರನ್ನು ಹೊಂದಿದ್ದೇವೆ. ಆದ್ದರಿಂದ ಮುಂದೆ ನಡೆಯುವ ಚುನಾವಣೆಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ತಾಲೂಕಿನಾದ್ಯಂತ ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾನೈಟ್ ರಾಜಶೇಖರ್ ಸೇರಿದಂತೆ ಇತರೆ ವೀರಶೈವ ಸಮುದಾಯದವರನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು.
ಅದಲ್ಲದೆ ನಾನು ಅಖಿಲ ಭಾರತ ಬೇಲೂರು ವೀರಶೈವ ಮಹಾ ಸಭಾ ಯುವ ಘಟಕದ ಅಧ್ಯಕ್ಷನಾಗಿ ಕೇಳಿಕೊಳ್ಳುವುದೇನೆಂದರೆ ಹಾಸನ ಜಿಲ್ಲೆಯಾದ್ಯಂತ ೩.೮೦ ಸಾವಿರ ಮತದಾರರನ್ನು ಹೊಂದಿದ್ದು ಅರಸೀಕೆರೆ. ಸಕಲೇಶಪುರ, ಬೇಲೂರು ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಮತದಾರರಿದ್ದು, ಸಕಲೇಶಪುರ ತಾಲೂಕು ಹೊರತುಪಡಿಸಿ ಅರಸೀಕೆರೆ ಮತ್ತು ಬೇಲೂರು ಕ್ಷೇತ್ರದಲ್ಲಿ ಪ್ರಾದೇಶಿಕ ಮತ್ತು ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ವೀರಶೈವ ಸಮುದಾಯದ ಅಭ್ಯರ್ಥಿಗಳನ್ನೇ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ನಮ್ಮ ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ, ಈಶ್ವರ ಕಂಡ್ರೆ, ಸೇರಿದಂತೆ ಇತರ ಮುಖಂಡರನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಿಂದಲೂ ನಡೆಯುವ ಚುನಾವಣೆಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೀರಶೈವ ಮುಖಂಡ ಹಾರೋಹಳ್ಳಿ ಜಗದೀಶ ಮಾತನಾಡಿ, ಈ ಕ್ಷೇತ್ರದಲ್ಲಿ ಜಾತ್ಯಾತೀತವಾಗಿ ಯಾವುದೇ ಜಾತಿ ಭೇದ ಭಾವ ಇಲ್ಲದೆ ಇತರೆ ಸಮಾಜದವರೊಂದಿಗೆ ನಮ್ಮ ಸಮಾಜವು ಸೌಹಾರ್ದತವಾಗಿ ಬರುತ್ತಿದ್ದು ಈ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಈ ಬಾರಿ ಟಿಕೆಟ್ ನೀಡಿದರೆ ಎಲ್ಲರ ಸಹಕಾರದೊಂದಿಗೆ ವಿಧಾನಸಭೆಗೆ ಆಯ್ಕೆ ಮಾಡಿ ಕಳಿಸುತ್ತೇವೆ ಇಲ್ಲದಿದ್ದರೆ ತಾಲೂಕಿನಾದ್ಯಂತ ಇದರ ಪರಿಣಾಮವನ್ನು ಎದುರಿಸಬೇಕಾಗಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಬೇಲೂರು ವೀರಶೈವ ಮಹಾಸಭಾ ಯುವ ಘಟಕದ ಸದಸ್ಯರಾದ ಕುಮಾರಸ್ವಾಮಿ, ಭರತ್, ಆನಂದ್ ಬ್ಯಾಡ್ರಳ್ಳಿ, ವಸಂತ ಪಟೇಲ್ ಸೇರಿದಂತೆ ಇತರರು ಹಾಜರಿದ್ದರು.