ಶ್ರವಣಬೆಳಗೊಳ: ಪ್ರಾತಃಸ್ಮರಣೀಯ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಮಾಧಿ ಮರಣ ಹೊಂದಿದ ಪ್ರಯುಕ್ತ ದೇಹ ದಹನಾದಿ ಕ್ರಿಯೆಗಳ ಸರ್ವದೋಷ ಪ್ರಾಯಶ್ಚಿತ ಮತ್ತು ಆತ್ಮಶಾಂತಿಗಾಗಿ ಜೈನ ಮಠದ ಚಂದ್ರನಾಥ ಬಸದಿಯಲ್ಲಿ ಪೂಜೆ ಮತ್ತು ಕರ್ಮ ದಹನ ಆರಾಧನೆಯನ್ನು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು.
ಭಗವಾನ್ ಚಂದ್ರನಾಥ ತೀರ್ಥಂಕರರ ಮತ್ತು ಕ್ಷೇತ್ರದ ಆದಿದೇವತೆ ಶ್ರೀ ಕೂಷ್ಮಾಂಡಿನಿ ದೇವಿಯ ಸನ್ನಿಧಿಯಲ್ಲಿ ನವ ಕಲಶದಿಂದ ಪಂಚಾಮೃತ ಅಭಿಷೇಕ ಮತ್ತು ಕೂಷ್ಮಾಂಡಿನಿ ದೇವಿಗೆ ಪೂಜೆಯೊಂದಿಗೆ ವಿಶೇಷ ಅಲಂಕಾರ ಶೋಡಶೋಪಚಾರವನ್ನು ನೆರವೇರಿಸಲಾಯಿತು. ಸರ್ವದೋಷ ಪ್ರಾಯಶ್ಚಿತ ಕರ್ಮದಹನ ಆರಾಧನೆ ನಿಮಿತ್ತ ಚಂದ್ರನಾಥ ತೀರ್ಥಂಕರರ ಸನ್ನಿಧಿಯಲ್ಲಿ ಮಂಡಲವನ್ನು ವಿವಿಧ ಬಣ್ಣಗಳಿಂದ 7 ಸುತ್ತು ರಚಿಸಲಾಗಿತ್ತು. ಮಹಾಶಾಂತಿ ಮಂತ್ರಗಳೊಂದಿಗೆ ಅಷ್ಟ ಮಂಗಳ ಕಲಶ ಶಾಂತಿ ಕಲಶದೊಂದಿಗೆ ಅಷ್ಟ ಮಂಗಳಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಅಷ್ಟ ವಿಧಾರ್ಚನೆಯೊಂದಿಗೆ 126 ಅರ್ಘ್ಯಗಳನ್ನು ಮತ್ತು 108 ಪುಷ್ಪಗಳನ್ನು ಅಭಿನವ ಚಾರುಕೀರ್ತಿ ಶ್ರೀಗಳು ಅರ್ಪಿಸಿದರು. ಮಹಾ ಶಾಂತಿಧಾರ ದೊಂದಿಗೆ ಮಂಗಳಾರತಿ ಮಾಡಿ ಗಂಧೋದಕವನ್ನು ವಿತರಿಸಲಾಯಿತು.
ಪೂಜಾ ನೇತೃತ್ವವನ್ನು ಪ್ರತಿಷ್ಠಾಚಾರ್ಯ ಎಸ್.ಪಿ.ಜಿನೇಶ್ ಕುಮಾರ್, ಎಸ್.ಡಿ.ನಂದಕುಮಾರ್ ಶಾಸ್ತ್ರಿ, ಎಸ್.ಪಿ.ಜೀವೇಂದ್ರ ಕುಮಾರ್ ಶಾಸ್ತ್ರಿ, ಕಿರಣ್ ಕುಮಾರ್ ವಹಿಸಿದ್ದರು. ಪಾವನ ಸಾನಿಧ್ಯವನ್ನು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಸೋಂದಾ ಜೈನ ಮಠದ ಸ್ವಸ್ತಿಶ್ರೀ ಅಕಲಂಕ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಮಠದ ಸ್ವಸ್ತಿಶ್ರೀ ಬಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಕ್ಷುಲ್ಲಕ ಶ್ರೀ ಪ್ರಮೇಯ ಸಾಗರರು, ಕಾರ್ಯಾಧ್ಯಕ್ಷ ಎಚ್.ಪಿ.ಅಶೋಕ್ ಕುಮಾರ್, ಸದಸ್ಯ ದೇವೇಂದ್ರ ಕುಮಾರ್, ಎಸ್.ಡಿ.ಜೆ.ಎಂ, ಐ.ಎಂ.ಸಿ. ಟ್ರಸ್ಟ್ ಮುಖ್ಯ ಕಾರ್ಯದರ್ಶಿ ಎಸ್.ಪಿ ಮಹೇಶ್, ಜೈನ ಸಮಾಜದ ಮುಖಂಡರುಗಳಾದ ಪದ್ಮ ಕುಮಾರ್, ಎಸ್.ಪಿ ಭಾನು ಕುಮಾರ್, ಪ್ರೊ. ಜಯಕುಮಾರ್ ಉಪಾಧ್ಯೆ, ವಿನೋದ್ ಬಾಕ್ಲಿವಾಲ್, ಎನ್.ಆರ್.ಭರತ್ ರಾಜ್, ಹಜಾರಿ ಪಾರ್ಶ್ವನಾಥ್ ಕೂಷ್ಮಾಂಡಿನಿ, ಮಹಿಳಾ ಸಮಾಜದ ಪದಾಧಿಕಾರಿಗಳು ಇದ್ದರು.