ಚನ್ನರಾಯಪಟ್ಟಣ: ಪಟ್ಟಣದಲ್ಲಿ ಶ್ರೀರಾಮ ನವಮಿ ದಿವಸ ಮೆರವಣಿಗೆಯಲ್ಲಿ ಹಲ್ಲೆಯಾಗಿರುವ ಹಿಂದೂ ಯುವಕರ ಆರೋಗ್ಯ ವಿಚಾರಿಸದೆ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಹಿಂದೂ ವಿರೋಧಿ ನಿಲುವು ತೋರುತ್ತಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಎಂ.ರವಿ ಕಿಡಿ ಕಾರಿದರು.
ಪಟ್ಟಣದಲ್ಲಿ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ಪಟ್ಟಣದಲ್ಲಿ ಮುಸ್ಲಿಂ ಯುವಕರು ಹಿಂದೂಗಳ ಮೇಲೆ ಹಲ್ಲೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಶನಿದೇವರ ಉತ್ಸವದಲ್ಲಿಯೂ ಕೋಮು ಗಲಭೆ ಸೃಷ್ಟಿಸಿದ್ದರು. ಈ ವೇಳೆಯೂ ಜನಪ್ರತಿನಿಧಿಗಳು ಹಿಂದೂ ವಿರೋಧಿ ನಿಲುವು ತೋರಿದ್ದರು. ಹಿಂದುಗಳ ಮೇಲೆ ಹಲ್ಲೆಯಾದರೂ ಯೋಗ ಕ್ಷೇಮ ವಿಚಾರಿಸದೆ ಮಲತಾಯಿ ದೋರಣೆ ಮಾಡುತ್ತಿದ್ದಾರೆ ಎಂದರು. ಮತ ಬ್ಯಾಂಕಿಗಾಗಿ ಅಣ್ಣ ತಮ್ಮಂದಿರನ್ನು ಆರೋಗ್ಯ ವಿಚಾರಣೆ ಮಾಡದೆ ಇರುವ ರಾಜಕಾರಣಿಗಳಿಗೆ ತಕ್ಕ ಉತ್ತರ ನೀಡಬೇಕು. ಇಂದು ನಮ್ಮ ಅಕ್ಕ ಪಕ್ಕದ ಮನೆಯವರಿಗೆ ತೊಂದರೆ ಆಗಿದೆ, ಮುಂದೆ ನಮ್ಮ ಮನೆಗೂ ತೊಂದರೆ ಆಗಬಹುದು. ಇದನ್ನು ಮನದಲ್ಲಿ ಇಟ್ಟುಕೊಂಡು ಎಲ್ಲರೂ ಒಗ್ಗೂಡಬೇಕು. ಇಲ್ಲದೆ ಹೋದರೆ ಮುಂದೆ ನಮ್ಮ ಉಳಿಗಾಲವಿಲ್ಲ, ಹಲ್ಲೆಯಾದವರ ಮೇಲೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದರು.
ತಾಲೂಕಿನಲ್ಲಿ ಎರಡು ಲಕ್ಷ ಹಿಂದುಗಳು ಇದ್ದೇವೆ, ಎಲ್ಲರೂ ಶಾಂತಿಯಿಂದ ನೋಡುತ್ತಿದ್ದೇವೆ. ಇದೇ ಹಾದಿಯಲ್ಲಿ ಮುಂದೆ ಸಾಗದೇ ಹೋದರೆ ಪರಿಣಾಮ ಎದುರಿಸಬೇಕಾಗುತ್ತದೆ. ಪೊಲೀಸರು ತನಿಖೆ ಮಾಡಬೇಕು, ಹಲ್ಲೆಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಪುಸಲಾಯಿಸಿ ಠಾಣೆಗೆ ಕರೆಸಿ ಅಲ್ಲಿಂದ ಜೈಲಿಗೆ ಕಳುಹಿಸಿದ್ದಾರೆ. ಪೊಲೀಸರು ಜನಪ್ರತಿನಿಧಿಗಳ ಕೈಗೊಂಬೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಸಬೆ ಮಾಜಿ ಸದಸ್ಯ ಧರಣಿ ನಾಗೇಶ ಮಾತನಾಡಿ, ಪಟ್ಟಣದಲ್ಲಿ ನಾಲ್ಕೈದು ಬಾರಿ ಈ ರೀತಿ ಹಿಂದೂಗಳ ಯಾತ್ರೆ ವೇಳೆ ಘರ್ಷಣೆ ಆಗಿದೆ. ಅದೇ ಮುಸ್ಲಿಂ ಹಬ್ಬದ ವೇಳೆ ಮೆರವಣಿಗೆ ಮಾಡುವಾಗ ಹಿಂದುಗಳು ಸಹಕಾರ ಮಾಡುತ್ತಾರೆ. ಆದರೆ ಹಿಂದೂಗಳು ಯಾತ್ರೆ ಮಾಡುವಾಗ ಅಲ್ಪಸಂಖ್ಯಾತರೂ ಸಹಕಾರ ಮಾಡಬೇಕು, ಬದಲಾಗಿ ಘರ್ಷಣೆ ಮಾಡುತ್ತಾರೆ ಇದು ಎಷ್ಟು ಸರಿ? ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಹೊರತು ಅಮಾಯಕರಿಗೆ ತೊಂದರೆ ಕೊಡುವುದು ತರವಲ್ಲ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಡಿ ಎಂ ರವಿ, ಪುರಸಬೆ ಮಾಜಿ ಸದಸ್ಯ ಧರಣಿ ನಾಗೇಶ್, ಕೆರೆಬೀದಿ ಜಗದೀಶ್, ಹಲ್ಲೆಗೆ ಒಳಗಾದ ರಾಕೇಶ ತಂದೆ ವೆಂಕಟೇಶ, ಹರ್ಷನ ತಂದೆ ಪರಮೇಶ, ರಾಷ್ಟ್ರ ರಕ್ಷಣಾ ಪಡೆ ಜಿಲ್ಲಾಧ್ಯಕ್ಷ ಸುರೇಶ ಸೇರಿದಂತೆ ಇತರರು ಹಾಜರಿದ್ದರು.