ಹಾಸನ: ದಲಿತಪರ ಹೋರಾಟಗಾರ ದಿವಂಗತ ಬಿ.ಪಿ ಜಯರಾಂ ಅವರ ಐದನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಎಚ್.ಪಿ ಸ್ವರೂಪ್ ಹಾಗೂ ದಲಿತ ಮುಖಂಡರು ಜಯರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಈ ವೇಳೆ ಎಚ್.ಪಿ ಸ್ವರೂಪ್ ಮಾತನಾಡಿ, ದಲಿತ ಚಳುವಳಿಯಲ್ಲಿ ಜಯರಾಂ ಅವರ ಕೊಡುಗೆ ಅಪಾರ, ಅವರ ಹೋರಾಟದ ಹಾದಿಗಳು ಎಲ್ಲರಿಗೂ ಮಾರ್ಗದರ್ಶನವಾಗಿದ್ದು ಎಲ್ಲರೂ ಅವರ ಹಾದಿಯಲ್ಲಿ ನಡೆಯೋಣ ಎಂದರು.
ಜಯರಾಂ ಅವರು ನನ್ನ ತಂದೆ ದಿವಂಗತ ಎಚ್.ಎಸ್ ಪ್ರಕಾಶ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು, ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತೋಷದ ವಿಚಾರ. ಜಿಲ್ಲೆಯಲ್ಲಿ ದೀನ ದಲಿತರಿಗೆ ಹಾಗೂ ಶೋಷಿತ ಸಮುದಾಯಕ್ಕೆ ಜಯರಾಂ ಅವರ ಕೊಡುಗೆ ಅಪಾರವಾಗಿದೆ ಎಂದರು.
ದಸಂಸ ಮುಖಂಡ ಎಚ್.ಕೆ ಸಂದೇಶ್ ಮಾತನಾಡಿ, ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದ ಪ್ರಾಮಾಣಿಕ ಹೋರಾಟಗಾರ ದಿವಂಗತ ಜಯರಾಂ ಅವರ ಅಗಲಿಕೆ ದಲಿತ ಸಂಘರ್ಷ ಸಮಿತಿಗೆ ತುಂಬಲಾರದ ನಷ್ಟವಾಗಿದೆ. ಅವರು ತಮ್ಮ ಬದುಕಿನ ಉದ್ದಕ್ಕೂ ದಲಿತರ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ದಸಂಸ ಮುಖಂಡ ಕೃಷ್ಣದಾಸ ಹಾಗೂ ಹೆತ್ತೂರು ನಾಗರಾಜ್ ಮಾತನಾಡಿದರು. ರಾಜು, ರಮೇಶ, ಮಂಜು ತೆಜುರು, ಗೋವಿಂದ, ಕುಮಾರಸ್ವಾಮಿ, ಅರುಣ ಜಯರಾಂ, ಅಶೋಕ ಜಯರಾಂ, ಇತರರು ಇದ್ದರು.