ಹಾಸನ: ಎಲ್ಲಾ ಧರ್ಮ ಗ್ರಂಥಗಳು ಸನ್ಮಾರ್ಗದ ಹಾದಿಯನ್ನೇ ತೋರಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೆ.ಎಂ.ಅರ್ಚನಾ ಕಿವಿಮಾತು ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಮಹತೆ ಇಸ್ಲಾಮಿ ಹಿಂದ್ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯನಾದವರು ಧರ್ಮಗ್ರಂಥಗಳನ್ನು ಅರ್ಥ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ಇಂತಹ ಗ್ರಂಥಗಳ ಬಗ್ಗೆ ಅರೆಬರೆ ತಿಳಿದುಕೊಂಡರೇ ಅಪಾಯವೇ ಹೆಚ್ಚು ಬರುವುದರಿಂದ ಅಂತಹದಕ್ಕೆ ಅವಕಾಶ ಕೊಡಬಾರದು. ಎಲ್ಲಾ ಧರ್ಮಗ್ರಂಥಗಳು ಸನ್ಮಾರ್ಗದ ಹಾದಿಯನ್ನೇ ತೋರಿಸುತ್ತದೆ ಎಂಬುದರ ಬಗ್ಗೆ ತಿಳಿಯಬೇಕೆಂದರು.
ಕುರಾನ್ ಸಮಗ್ರ ಪರಿಚಯವನ್ನು ಪ್ರವಚನಗಾರರಾದ ಜ||ಲಾಲ್ ಹುಸೇನ್ ಕಂದಗಲ್ ಮಾಡಿಕೊಡುತ್ತಾ, ಮಾನವನ ನೈಜ ಸೃಷ್ಟಿಕರ್ತ ದೇವರು. ಇವರ ವತಿಯಿಂದ ಸರ್ವ ಮಾನವಕುಲಕ್ಕೆ ಜೀವನದ ಎಲ್ಲಾ ರಂಗಗಳಲ್ಲಿ ಮಾರ್ಗದರ್ಶಕವಾಗಿ ಬಂದಂತಹ ಪವಿತ್ರ ಕುರಾನ್ ತನ್ನ ದಿವ್ಯ ವಾಣಿಯಿಂದ ಮತ್ತು ತನ್ನ ಸಂದೇಶಗಳಿಂದ ಪರಿಪೂರ್ಣ ಮನುಷ್ಯನ ಪ್ರತೀಕವಾದಂತಹ ವ್ಯಕ್ತಿಗಳನ್ನು ನಿರ್ಮಿಸಿದೆ ಎಂದರು. ಅಡಿಯಿಂದ ಮುಡಿ ತನಕ ನ್ಯಾಯ ಮತ್ತು ದೇವ ಸಾಮ್ರಾಜ್ಯದ ಪ್ರತೀಕವಾದಂತಹ ಒಂದು ರಾಷ್ಟ್ರಕ್ಕೆ ಜನ್ಮ ನೀಡಿತು. ಹಸಿದವನನ್ನು ಹುಡುಕಿಕೊಂಡು ಹೋಗಿ ಅನ್ನ ನೀಡಬೇಕು ಎಂದು ಆದೇಶ ನೀಡಿದ ಜೊತೆಗೆ ದಿನಗಟ್ಟಲೆ ತಿರುಗಾಡಿದರೂ ಸಹ ಒಬ್ಬ ಹಸಿದವನು ಸಿಗದಂತಹ ಸಂಪತ್ ಭರಿತವಾದಂತಹ ರಾಜ್ಯಕ್ಕೆ ಅಡಿಗಲ್ಲು ಹಾಕಿತು ಎಂದು ಕುರಾನ್ ಸಂದೇಶದ ಬಗ್ಗೆ ಸಮಗ್ರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಅಪ್ಪಾಜಿಗೌಡ, ಯುವಕ್ ಪರಿಷದ್ ಕಾರ್ಯದರ್ಶಿ ವಿಕಾಸ್ ಕೊಠಾರಿ, ಭಾರತೀ ಅಸೋಸಿಯೇಟ್ಸ್ ಜಿ.ಎಂ. ವಿನೋದ, ಜಮಾತೆ ಇಸ್ಲಾಮಿ ಹಾಸನ ಜಿಲ್ಲೆ ಅಧ್ಯಕ್ಷರು ಜನಾಬ್ ಸದರುಲ್ಲಾ ಖಾನ್, ಜಮಾತೆ ಇಸ್ಲಾಮಿ ಸಂಚಾಲಕರು ಜನಾಬ್ ಅಬ್ದುಲ್ ಖಾಲಿಖ್, ಸಂತ ಅಂತೋನಿ ಚರ್ಚ್ ಧರ್ಮಗುರು ಫಾದರ್ ಪ್ಯಾಟ್ರಿಕ್ ಜೋನ್ಸ್ ರಾವ್ ಇತರರು ಉಪಸ್ಥಿತರಿದ್ದರು.