ಅರಸೀಕೆರೆ: ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ೨ಬಿ ಶೇ.೪ರಷ್ಟು ಮಾಡಿದ ನಿರ್ಣಯವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಮತ್ತು ಅರಸೀಕೆರೆ ಮುಸ್ಲಿಂ ಸಮಾಜದ ವತಿಯಿಂದ ಆಗ್ರಹ ಮಾಡಿದರು.
ಅರಸೀಕೆರೆ ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಹಾಗೂ ಅರಸೀಕೆರೆಯ ಹಲವು ಮುಸ್ಲಿಂ ಸಂಘ ಸಂಸ್ಥೆ ವತಿಯಿಂದ ತಾಲೂಕ್ ಆಡಳಿತ ಕಚೇರಿ ಮುಂಭಾಗದಲ್ಲಿ ಗ್ರೇಡ್ ೨ ತಹಶೀಲ್ದಾರ್ ಪಾಲಕ್ಷ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಮಾಜಿ ಕಾರ್ಯದರ್ಶಿ ರಿಯಾಜ್ ಪಾಷಾ ಅವರು ಮನವಿ ಪತ್ರವನ್ನು ಓದಿ ತಿಳಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಅಬ್ದುಲ್ ಜಮೀಲ್ ಮಾತನಾಡಿ ರಾಜ್ಯದಲ್ಲಿ ಹಲವು ವರ್ಷಗಳಿಂದ ಇದ್ದಂತ ಮುಸ್ಲಿಂ ಸಮಾಜದ ಮೀಸಲಾತಿಯನ್ನು ಏಕಾಏಕಿ ರದ್ದು ಮಾಡಿರೋದು ಸರಿಯಾದ ನಿರ್ಣಯವಲ್ಲ, ಕೂಡಲೇ ಈ ಆದೇಶವನ್ನು ಹಿಂಪಡೆಯುವಂತೆ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಹಾಸನ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷರಾದ ಸೈಯದ್ ಸಿಕಂದರ್ ಮಾತನಾಡಿ, ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಮೀಸಲಾತಿಯನ್ನು ರದ್ದುಪಡಿಸಿ ಬೇರೆ ಸಮಾಜಕ್ಕೆ ನೀಡಿದ್ದೇವೆ ಎಂದು ಹೇಳುತ್ತಿರುವುದು ಒಂದು ಪಕ್ಷಕ್ಕೆ ಗೌರವ ತರುವಂತ ಹೇಳಿಕೆಯಲ್ಲ, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುನ್ನಿ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ಪೈಯುಮುದ್ದೀನ್ ಖಾದ್ರಿ ಹಾಗೂ ಹಲವು ಮಸೀದಿಯ ಧರ್ಮಗುರುಗಳು, ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷರಾದ ಸೈಯದ್ ರಫಿಕ, ಉಪಾಧ್ಯಕ್ಷರಾದ ನಸಿರುದ್ದೀನ್, ಕಾರ್ಯದರ್ಶಿಗಳಾದ ನವಾಜ್ ಪಾಷಾ ಹಾಗೂ ಎಲ್ಲಾ ಸದಸ್ಯರುಗಳು, ಹಲವು ಮುಸ್ಲಿಂ ಕಮಿಟಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಗಳು, ಮುಸ್ಲಿಂ ಸಮಾಜದ ಮುಖಂಡರುಗಳು ಉಪಸ್ಥಿತಿ ಇದ್ದರು.