ಬೇಲೂರು: ವೀರಶೈವ- ಲಿಂಗಾಯತ ಸಮುದಾಯದ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸಮಾಜಕ್ಕೆ ಅಗತ್ಯ ಇರುವ ಮೀಸಲಾತಿ ಪಡೆಯಲು ನಾವು ಸಂಘಟನಾತ್ಮಕ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಘಟಕದ ರೇಣುಕಾ ಪ್ರಸನ್ನ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈಗಾಗಲೇ ಸಮುದಾಯಕ್ಕೆ ನ್ಯಾಯಬದ್ಧವಾಗಿ ಲಭಿಸುವ ಒಬಿಸಿ ಮೀಸಲಾತಿ ಮುಂದೆ ಇಲ್ಲವಾಗಿದೆ. ಆದ್ದರಿಂದ ಹೋರಾಟ ನಡೆಸಬೇಕಾಗಿದೆ ಎಂದ ಅವರು ರಾಜ್ಯ ಸಮಿತಿಯಿಂದ ಸದ್ಯ ಐದು ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗಿದೆ. ಕೋವಿಡ್ ಕಾರಣದಿಂದ ತಡವಾಗಿದ್ದು, ಶೇ. 85ರಷ್ಟು ಮಕ್ಕಳಿಗೆ ಅನೇಕ ರಾಜ್ಯದ ನಮ್ಮ ಸಮುದಾಯದ ಮಕ್ಕಳಿಗೆ ನೀಡಲಾಗಿದೆ. ಯುವ ಸಮುದಾಯದ ಮಕ್ಕಳ ಶಿಕ್ಷಣದ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ವಸತಿ ಶಾಲೆಯನ್ನು, ಆರು ಜಿಲ್ಲೆಯ ವಸತಿ ಶಾಲೆಗೆ ಗುದ್ದಲಿ ಪೂಜೆ ನಡೆಸಲಾಗಿದೆ. ಸಮಾಜದ ಕಟ್ಟಡ ನಿರ್ಮಿಸುವ ಮಹಾಸಭಾಕ್ಕೆ ಆರ್ಥಿಕ ಸಹಾಯ ಮಾಡಲಾಗುತ್ತದೆ ಎಂದರು.
ಸಮಾಜ ಸೇವಕ ಗ್ರಾನೈಟ್ ರಾಜಶೇಖರ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಪ್ರತಿ ವರ್ಷ ನೀಡುವ ಪ್ರತಿಭಾ ಪುರಸ್ಕಾರ ನಿಜಕ್ಕೂ ತಡವಾಗಿದೆ. ಅದರೂ ಎಲ್ಲಾ ಮಕ್ಕಳಿಗೆ ಪುರಸ್ಕಾರ ನಡೆಸುವ ಕೆಲಸಕ್ಕೆ ವಂದನೆ ಸಲ್ಲಿಸಲಾಗುತ್ತದೆ. ವೀರಶೈವ ಲಿಂಗಾಯತರಲ್ಲಿ ಒಳ ಪಂಗಡದ ಕಿತ್ತಾಟದಿಂದ ಸಮಾಜ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಅರ್ಥಿಕ ಕ್ಷೇತ್ರದಲ್ಲಿ ತೀವ್ರ ಹಿನ್ನಡೆಯಾಗಿದೆ. ಮೈಸೂರು ಕರ್ನಾಟಕದಲ್ಲಿ 17ಕ್ಕೂ ಹೆಚ್ಚಿನ ವಿಧಾನಸಭಾ ಸದಸ್ಯರ ಸಂಖ್ಯೆ ಏಕ ಅಂಕಿಗೆ ಬಂದಿದೆ. ಒಳ ಪಂಗಡದ ಗೊಂದಲವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಮಕ್ಕಳಿಗೆ ಉನ್ನತ ಹುದ್ದೆಗಳಿಗೆ ಲಗ್ಗೆ ಹಾಕುವ ಮನೋಭಾವನೆ ಬೆಳೆಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು, ಕಾರ್ಜುಹಳ್ಳಿ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳು, ಶಾಸಕ ಕೆ.ಎಸ್. ಲಿಂಗೇಶ್, ಬಿಜೆಪಿ ಮುಖಂಡ ಸಿದ್ದೇಶ್ ನಾಗೇಂದ್ರ, ಜಿಲ್ಲಾ ವೀರ ಶೈವ ಸಂಘದ ಅಧ್ಯಕ್ಷ ಗುರುದೇವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ, ತಾಲ್ಲೂಕು ಅಧ್ಯಕ್ಷ ರವಿಕುಮಾರ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರಹಳ್ಳಿ, ಹಿರಿಯ ವಕೀಲರಾದ ಸಿ.ಎಂ.ನಿಂಗರಾಜ, ಬಿ.ಎಸ್. ರಾಜಶೇಖರ, ಪ್ರಧಾನ ಕಾರ್ಯದರ್ಶಿ ಕನಾಯ್ಕನಹಳ್ಳಿ ಮಹದೇವ, ಬಿ.ಕೆ.ಚಂದ್ರಕಲಾ, ಸಂತೋಷ ಕೆಂಚಾಂಬ, ವಿಕ್ರಂ ಕೌರಿ, ಅನ್ನಪೂರ್ಣ, ದಿನೇಶ, ಹಗರೆ ಕಾಂತರಾಜ, ಕಟ್ಟಾಯ ಶಿವಕುಮಾರ, ಯುವ ಘಟಕದ ಅಧ್ಯಕ್ಷ ಗೆಂಡೇಹಳ್ಳಿ ಚೇತನ, ಅದ್ದೂರಿ ಚೇತನ ಇನ್ನೂ ಮುಂತಾದವರು ಹಾಜರಿದ್ದರು.