ಅರಕಲಗೂಡು: ವಕೀಲರುಗಳು ತಮ್ಮ ಕಕ್ಷಿದಾರರ ವಕಾಲತುಗಳನ್ನು ಶೀಘ್ರದಲ್ಲಿ ಪರಿಹರಿಸಿ ಕಕ್ಷಿದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಹಿರಿಯ ಶ್ರೇಣಿ ನ್ಯಾಯಾಧೀಶ ಮುಜಾಫರ್ ತಿಳಿಸಿದರು.
ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಕೀಲರ ಭವನದ ಕಚೇರಿಯ ಬೀಗದ ಕೀಯನ್ನು ವಕೀಲರ ಸಂಘಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಕಕ್ಷಿದಾರರು ಶೀಘ್ರದಲ್ಲಿ ನ್ಯಾಯ ದೊರಕುತ್ತದೆ ಎಂದು ವಕೀಲರಿಗೆ ವಕಾಲತ್ತುಗಳನ್ನು ವಹಿಸಿರುತ್ತಾರೆ. ಅವರುಗಳು ಶೀಘ್ರದಲ್ಲಿ ಅವರ ಕಷ್ಟಗಳನ್ನು ಪರಿಹರಿಸಿ ನ್ಯಾಯಯುತವಾದ ಜಯವನ್ನು ದೊರಕಿಸಿಕೊಟ್ಟು ಅವರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ವಕೀಲರ ಭವನವನ್ನು ಬರೀ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿಯವರೆ ನಿರ್ವಹಣೆ ಮಾಡಬೇಕೆಂದು ತಿಳಿಯಕೂಡದು, ಎಲ್ಲಾ ವಕೀಲರ ಜವಾಬ್ದಾರಿಯು ಇರುತ್ತದೆ, ಎಲ್ಲಾ ವಕೀಲರು ಸಹ ತಮ್ಮ ಸ್ವತಹ ಮನೆಯನ್ನು ನೋಡಿಕೊಂಡಂತೆ ನೋಡಿಕೊಂಡಾಗ ಮಾತ್ರ ಭವನವು ಸುಂದರವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಿರಿಯ ಶ್ರೇಣಿಯ ನ್ಯಾಯಾಧೀಶರಾದ ಚೇತನರವರು ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ದೇವರಾಜ, ಖಜಾಂಜಿ ಇರ್ಫಾನ್, ಹಿರಿಯ ವಕೀಲರಾದ ಶಂಕರಯ್ಯ, ಮಹೇಶ, ನಾಗರಾಜು ಸೇರಿದಂತೆ ಎಲ್ಲಾ ವಕೀಲರು ಸಹ ಹಾಜರಿದ್ದರು.