ನುಗ್ಗೇಹಳ್ಳಿ: ಶ್ರೀ ಜಯ ಗುಂಡೇಶ್ವರ ದೇವಾಲಯ ಇತಿಹಾಸ ಪ್ರಸಿದ್ಧವಾಗಿದ್ದು ದೇವಾಲಯದಲ್ಲಿ ಶಿವಲಿಂಗದ ಮೇಲೆ ವರ್ಷಕ್ಕೆ ಒಮ್ಮೆ ಮಾತ್ರ ಸೂರ್ಯನ ಕಿರಣಗಳು ಬೀಳುವುದರಿಂದ ಕೌತಕವನ್ನು ಹೆಚ್ಚು ಮಾಡಿದೆ. ಮುಂಬರುವ ದಿನಗಳಲ್ಲಿ ದೇವಾಲಯ ಹೆಚ್ಚು ಪ್ರಸಿದ್ದಿ ಗಳಿಸಲಿ ಎಂದು ಸಿ.ಎನ್ ಬಾಲಕೃಷ್ಣ ತಿಳಿಸಿದರು.
ಗ್ರಾಮದ ಗೋಸನಾಯಕನ ಕೊಪ್ಪಲು ಬಳಿ ಇರುವ ಇತಿಹಾಸ ಪ್ರಸಿದ್ಧ ಜೋಗನಾಥನ ಗುಡ್ಡದಲ್ಲಿ ಶ್ರೀ ಜಯಗುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಕಳೆದ ಮೂರು ತಿಂಗಳ ಹಿಂದೆಯೇ ಸುಮಾರು 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದರಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಹೆಚ್ಚು ಅನುಕೂಲವಾಗಿದೆ. ನಮ್ಮ ತಾಲೂಕಿನಲ್ಲಿ ಇಂತಹ ಐತಿಹಾಸಿಕ ಪುರಾಣ ಪ್ರಸಿದ್ಧ ದೇವಾಲಯವಿರುವುದು ಹೆಮ್ಮೆಯ ವಿಚಾರ ಎಂದರು.
ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಶ್ರೀ ಜಯಗುಂಡೇಶ್ವರ ದೇವಾಲಯದಲ್ಲಿ ಗುರುವಾರ ಅಕ್ಷಯ ಅಮಾವಾಸ್ಯೆಯು ಕೂಡ ಇರುವುದರಿಂದ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆಗಳು ನಡೆದವು. ವರ್ಷಕ್ಕೆ ಒಮ್ಮೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಸೂರ್ಯನ ಕಿರಣಗಳು ಮೂಲ ವಿಗ್ರಹಗಳ ಮೇಲೆ ಬೀಳುತ್ತಿರುವುದು ಹೆಚ್ಚು ವಿಶೇಷತೆಯನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ದೇವಾಲಯವನ್ನು ಇನ್ನು ಹೆಚ್ಚು ಅಭಿವೃದ್ಧಿಪಡಿಸಲು ಎಲ್ಲಾರ ಸಹಕಾರ ಮುಖ್ಯ, ಶಾಸಕರು ತಮ್ಮ ಅವಧಿಯಲ್ಲಿ ರಸ್ತೆ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ನುಗ್ಗೇಹಳ್ಳಿ ಗ್ರಾಮದ ಪಂಚಲಿಂಗಗಳ ಕ್ಷೇತ್ರದಲ್ಲಿ ಒಂದಾದ ಶ್ರೀ ಜಯಗುಂಡೇಶ್ವರ ದೇವಾಲಯದಲ್ಲಿ ಹೆಚ್ಚು ವಿಸ್ಮಯಗಳು ನಡೆಯುತ್ತಿವೆ ಎಂದರು.
ಶ್ರೀ ಜಯಗುಂಡೇಶ್ವರ ದೇವಾಲಯದ ವಿಸ್ಮಯ ನೋಡಲು ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಸ್ಮಯವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ದೊರೆಸ್ವಾಮಿ, ತೋಟಿ ನಾಗರಾಜ, ಪುಟ್ಟಸ್ವಾಮಿ, ಹೂವಿನಹಳ್ಳಿ ರಮೇಶ್, ದ್ರಾಕ್ಷಾಯಿಣಿ ಯಲ್ಲಪ್ಪ, ಎನ್.ಎಸ್ ಮಂಜುನಾಥ, ಸಮುದ್ರಹಳ್ಳಿ ರಾಮಚಂದ್ರು, ಸೋಮಶೇಖರಯ್ಯ, ಎನ್.ಸಿ ವಿಶ್ವನಾಥ, ಎನ್ .ಆರ್ ಪ್ರದೀಪ್, ಗುರುಪ್ರಸಾದ, ಯಲ್ಲಪ್ಪ ಅನೇಕರು ಹಾಜರಿದ್ದರು.