ಹಾಸನ: ದಾವಣೆಗೆರೆಯಿಂದ ಮನೆಯ ಗೃಹ ಪ್ರವೇಶ ಮುಗಿಸಿಕೊಂಡು ವಾಪಸ್ ಬರುವಾಗ ಟಿಪ್ಪರ್ ಲಾರಿಯೊಂದು ಓವರ್ ಟೇಕ್ ಮಾಡಲು ಹೋಗಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ಕು ಜನರಲ್ಲಿ ಅತ್ತೆ ಮತ್ತು ಸೊಸೆ ಇಬ್ಬರು ಸಾವನಪ್ಪಿದ ಘಟನೆ ಚನ್ನಗಿರಿ ಬಳಿ ನಡೆದಿದೆ.
ಬಾಳ್ಳುಪೇಟೆಯ ಕಾಫಿ ಪ್ಲಾಂಟರ್ ಮತ್ತು ಸಹ್ಯಾದ್ರಿ ಥೀಯೇಟರ್ ಮಾಲೀಕರಾಗಿದ್ದ ಬಿ.ಎಸ್ ಗುರುನಾಥ್ ಅವರ ಪತ್ನಿ ಮೈತ್ರಿದೇವಿ (70) ಹಾಗೂ ಸೊಸೆ ಸೌಜನ್ಯ (48) ಎಂಬುವವರೇ ರಸ್ತೆ ಅಪಘಾತದಲ್ಲಿ ಸಾವನಪ್ಪಿದ ದುರ್ದೈವಿಗಳು. ದಾವಣಗೆರೆಯಿಂದ ಹಿಂದಿರುಗಿ ಬರುವಾಗ ಚನ್ನಗಿರಿ ಬಳಿ ಟಿಪ್ಪರ್ ವಾಹನದ ಚಾಲಕ ಅತೀ ವೇಗದಲ್ಲಿ ಓವರ್ ಟೇಕ್ ಮಾಡುವ ಅವಸರದಲ್ಲಿ ಕಾರಿಗೆ ರಭಸವಾಗಿ ಗುದ್ದಿದ ಪರಿಣಾಮ ಕಾರು ಮೂರು ಪಲ್ಟಿಯಾಗಿ ರಸ್ತೆಗೆ ಉರುಳಿದೆ. ಈ ವೇಳೆ ಕಾರಿನಲ್ಲಿ ಮುಂಭಾಗ ಇದ್ದ ಬಿ.ಎಸ್ ಗುರುನಾಥ್ ಹಾಗೂ ಪುತ್ರ ರಾಜೇಶ್ ಇಬ್ಬರಿಗೆ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಗುರುನಾಥ್ ಪತ್ನಿ ಮೈತ್ರಿದೇವಿ ಮತ್ತು ಸೊಸೆ ಸೌಜನ್ಯ ಸೇಫ್ಟಿ ಬೆಲ್ಟ್ ಹಾಕಿರದ ಕಾರಣ ದೇಹಕ್ಕೆ ತೀವ್ರವಾದ ಪೆಟ್ಟು ಬಿದ್ದು ಸಾವನಪ್ಪಿದ್ದಾರೆ. ಪಾರ್ಥಿವ ಶರೀರವನ್ನು ಮಲ್ಲಿಗೆ ಹೋಟೇಲ್ ಮುಂಭಾಗದ ರಸ್ತೆ ಬಳಿ ಇರುವ ನಿವಾಸದಲ್ಲಿ ಇಡಲಾಗಿದ್ದು, ನಂತರ ಬಾಳ್ಳುಪೇಟೆಯಲ್ಲಿರುವ ಅವರ ಕಾಫಿತೋಟದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು.
ಶಾಸಕ ಪ್ರೀತ್ರಮ್ ಜೆ. ಗೌಡ, ಮಲೆನಾಡು ತಾಂತ್ರಿಕ ವಿದ್ಯಾಲಯದ ಆರ್.ಟಿ. ದೇವೇಗೌಡ, ತಿಪಟೂರು ಕ್ಷೇತ್ರದ ಮಾಜಿ ಶಾಸಕ ಷಡಕ್ಷರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಹೆಚ್.ಪಿ ಮೋಹನ, ಹಿರಿಯ ಪತ್ರಕರ್ತರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು ಆರ್.ಪಿ ವೆಂಕಟೇಶ ಮೂರ್ತಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷರು ಜಿ.ಎಲ್ ಮುದ್ದೇ ಗೌಡ, ಮಾಜಿ ಶಾಸಕ ಬಿ.ಆರ್. ಗುರುದೇವ, ಅಖಿಲ ಭಾರತ ವೀರ ಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಇತರರು ಅಂತಿಮ ದರ್ಶನ ಪಡೆದರು.