ಹಾಸನ: ಮಕ್ಕಳಿಗೆ ಜ್ವರ ಬಂದ ಸಂದರ್ಭದಲ್ಲಿ ಅಲರ್ಜಿ ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು. ಅದು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಆನಂದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೆನ್ನೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಜ್ವರ ಬಂದಲ್ಲಿ ಸಂಪೂರ್ಣವಾಗಿ ಗುಣವಾದ ನಂತರ ಶಾಲೆಗೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ನಿಗಾವಹಿಸುವಂತೆ ತಿಳಿಸಿದರು.
ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನಿರ್ದಿಷ್ಟಪಡಿಸಿರುವ ಲಸಿಕೆಗಳನ್ನು ಪೋಷಕರು ತಮ್ಮ ಮಗುವಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಹಾಕಿಸಲು ಗಮನ ಹರಿಸಬೇಕು ಎಂದರಲ್ಲದೆ, ಆರೋಗ್ಯ ಸಹಾಯಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಯೊಂದು ಮಗುವಿಗೂ ಯಾವುದೇ ಚುಚ್ಚು ಮದ್ದು ನೀಡುವುದು ತಪ್ಪದಂತೆ ಎಚ್ಚರ ವಹಿಸಲು ತಿಳಿಸಿದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ. ರಜಿನಿ ಮಾತನಾಡಿ, ದೇಶದಲ್ಲಿ ಪೊಲೀಯೋ ಮುಕ್ತಗೊಳಿಸಿದಂತೆ, ರುಬೆಲ ಕಾಯಿಲೆಮುಕ್ತ ದೇಶ ಎಂದು ಮಾಡುವ ಉದ್ದೇಶದಿಂದ ಕಾರ್ಯ ನಿರ್ವಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗರೂಕತೆ ವಹಿಸಿ ಮಕ್ಕಳಿಗೆ ಚುಚ್ಚು ಮದ್ದು ನೀಡಿರುವ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು ಎಂದರು.
ರಾಜ್ಯ ಉಪ ವಲಯ ತಂಡದ ಸಮನ್ವಯಾಧಿಕಾರಿ ಡಾ. ಅರುಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಸ್ವಾಮಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಚೇತನ, ಹಿಮ್ಸ್ ಮಕ್ಕಳ ವಿಭಾಗದ ಡಾ. ಮನುಪ್ರಕಾಶ್, ಡಾ. ಬಷೀರ್ ಮತ್ತಿತರರು ಹಾಜರಿದ್ದರು.