ಹಾಸನ: ಜಿಲ್ಲೆಯ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರೆಲ್ಲ ಸೇರಿ ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ ಎಂದು ದಲಿತ ಮುಖಂಡ ನಾರಾಯಣ ದಾಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ದಲಿತ ಸಂಘಟನೆಗಳು ಕೋಮುವಾದಿ ಮತ್ತು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಪಕ್ಷದ ವಿರುದ್ಧ ಜಾತ್ಯತೀತವಾಗಿ ನಡೆಯುವ ಪಕ್ಷದ ಪರ ನಿಲ್ಲುವ ಕುರಿತು ತೀರ್ಮಾನ ಕೈಗೊಳ್ಳಲಿದ್ದೇವೆ. ಈ ಸಂಬಂಧ ಕೆಲ ದಿನಗಳಲ್ಲಿ ಸಭೆಯನ್ನು ಆಯೋಜಿಸಲಾಗಿದ್ದು, ದಲಿತ ಸಂಘಟನೆಯ ಹಿರಿಯರು ಹಾಗೂ ಕಾರ್ಯಕರ್ತರು ಎಲ್ಲ ಸೇರಿ ಬಿಜೆಪಿ ಪಕ್ಷವನ್ನು ಹೊರತುಪಡಿಸಿ ಜಾತ್ಯಾತೀತವಾಗಿ ಚುನಾವಣಾ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
ಇತ್ತೀಚೆಗೆ ಕೆಲ ದಲಿತ ಸಂಘಟನೆ ಹೆಸರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಪರ ನಿಲ್ಲುವುದಾಗಿ ಘೋಷಣೆಯನ್ನು ಮಾಡಿದ್ದು, ಇದನ್ನು ನಾವು ಖಂಡಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ ಚೌಡಳ್ಳಿ, ಹರೀಶ, ಚಂದ್ರು, ರಂಗಸ್ವಾಮಿ ಇದ್ದರು.