ಹಾಸನ: ಕೋಮುವಾದಿ ಪಕ್ಷಗಳನ್ನು ದೂರ ಇಡುವಂತೆ ಜಾಗೃತಿ ಮೂಡಿಸುವ ಸಲುವಾಗಿ ದಲಿತ ಮುಸ್ಲಿಂ ಒಕ್ಕೂಟದ ವತಿಯಿಂದ ಮಾ. ೧೭ರಂದು ನಗರದಲ್ಲಿ ಬೃಹತ್ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಎಚ್.ಆರ್. ಪ್ರಸಾದ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ. ೧೭ರಂದು ಬೈಕ್ ರ್‍ಯಾಲಿ ಮಧ್ಯಾಹ್ನ ೨:೩೦ಕ್ಕೆ ಸಂತೆಪೇಟೆ ಸರ್ಕಲ್‌ನಿಂದ ಅಂಬೇಡ್ಕರ್ ಪ್ರತಿಮೆವರೆಗೂ ನಡೆಯಲಿದೆ. ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಸಮಾನ ಹಕ್ಕುಗಳು ಎಲ್ಲರಿಗೂ ಸಿಗುವ ಹಾಗೆ ಮತದಾನದ ಹಕ್ಕು ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಸಮನಾಗಿ ಹಂಚಬೇಕಾಗಿದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾರಿದರು. ಆದರೆ ಸರ್ಕಾರಗಳು ಜನರ ಹಿತಕ್ಕಾಗಿ ದುಡಿಯದೇ ಸಂವಿಧಾನ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ. ದಲಿತರ ಮೇಲೆ ದಿನನಿತ್ಯ ನಡೆಯುವ ದೌರ್ಜನಗಳಂತೆ ಮುಸಲ್ಮಾನರ ಮೇಲೆಯೂ ನಡೆಯುತ್ತಿದ್ದು ಇದನ್ನು ಒಕ್ಕೂಟ ವಿರೋಧಿಸುತ್ತದೆ. ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಕೂಡ ದಲಿತ ಮುಸಲ್ಮಾನರ ಮತಗಳು ಹೆಚ್ಚಾಗಿದ್ದು ನಾವು ನಿರ್ಣಾಯಕರಾಗದೆ ಕೇವಲ ವೋಟ್ ಬ್ಯಾಂಕ್‌ಗಳಿಗೋಸ್ಕರ ನಾವು ಬಳಕೆಯಾಗುತ್ತಿದ್ದೇವೆ.
ಆದ್ದರಿಂದ ದಲಿತ ಮುಸಲ್ಮಾನರು ಒಂದಾಗಿ ಹಾಸನದಲ್ಲಿ ಬರುವ ಚುನಾವಣೆಯಲ್ಲಿ ಕೋಮುವಾದಿ ಪಕ್ಷಗಳನ್ನು ದೂರ ಇಡುವಂತೆ ಜಾಗೃತಿ ಮೂಡಿಸುವ ಸಲುವಾಗಿ ಬೃಹತ್ ಬೈಕ್ ರ್‍ಯಾಲಿ ಹಾಗೂ ಒಕ್ಕೂಟದ ನಿಲುವುಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಎಚ್.ಎಸ್ ಪ್ರದೀಪ, ಹರೀಶ್ ಹುಳುವಾರೆ, ಆದಿಲ್ ಪಾಷಾ, ಮಸೂದ್ ರಿಜ್ವಾನ್, ಖಲೀದ್ ಖಾನ್, ಇರ್ಷಾಧ್ ಅಹಮದ್ ದೇಸಾಯಿ ಇದ್ದರು.