ಹಾಸನ: ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೇಕಡ ಮತದಾನ ಪ್ರಮಾಣವನ್ನು ಹೆಚ್ಚು ಮಾಡುವ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ಗೋಕುಲದಾಸ್ ಗಾರ್ಮೆಂಟ್ಸ್ ನಲ್ಲಿರುವ ಉದ್ಯೋಗಿಗಳಿಗೆ ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮರವರ ನೇತೃತ್ವದಲ್ಲಿ ಮತದಾನ ಜಾಗೃತಿ ಮೂಡಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ಚುನಾವಣಾ ದಿವಸದಂದು ತಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನೈತಿಕವಾಗಿ ಮತದಾನ ಮಾಡಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರಲ್ಲದೆ ಉದ್ಯೋಗಿಗಳಿಗೆ ವಿವಿ ಪ್ಯಾಟ್ ಮೂಲಕ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಿದರು.
ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ, ಜಿಲ್ಲಾ ಪಂಚಾಯತಿ ಸಹಾಯಕ ಕಾರ್ಯದರ್ಶಿ ಹರೀಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ್, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಯಮುನ ಹಾಗೂ ಆನಂದರಾಮು ಹಾಗೂ ಗೋಕುಲ್ ದಾಸ್ ಗಾರ್ಮೆಂಟ್ಸ್ ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.