ಹಾಸನ: ಚುನಾವಣೆಯಲ್ಲಿ ನಾವು ಮಾಡುವ ಮತದಾನವು ಶ್ರೇಷ್ಟವಾಗಿದ್ದು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಪ್ರತಿಯೊಬ್ಬರು ಕಡ್ಡಾಯವಾಗಿ ನೈತಿಕ ಮತದಾನ ಮಾಡಿ ಸೂಕ್ತ ಅಭ್ರಿಪ್ರಾಯನ್ನು ಆಯ್ಕೆ ಮಾಡುವ ಮೂಲಕ ನಮ್ಮ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ ಅವರು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ಕಾರೆಕೆರೆ ಕೃಷಿ ಮಹಾ ವಿದ್ಯಾಲಯ ಕಾಲೇಜಿನಲ್ಲಿಂದು ಆಯೋಜಿಸಲಾಗಿದ್ದ, ಮತದಾನ ಪ್ರಾತ್ಯಕ್ಷಕೆ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚುನಾವಣಾ ಆಯೋಗದ ಸೂಚನೆಯಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಮತದಾನ ಪ್ರಮಾಣವನ್ನು ಹೆಚ್ಚು ಮಾಡುವ ಹಿನ್ನೆಲೆಯಲ್ಲಿ ಕಡ್ಡಾಯ ಮತದಾನದ ಮಾಡುವ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದ್ದು, ಜೊತೆಗೆ ವಿವಿ ಪ್ಯಾಟ್ ಮೂಲಕ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದ ಮತದಾನ ಮಾಡುವಾಗ ನಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಮತದಾನ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇರುವ ವಿದ್ಯಾಥಿಗಳು ಗರುಡಾ ಆಪ್ ಮೂಲಕವೂ ಸೇರ್ಪಡೆಯಾಗಬಹದು ಎಂದು ಮಾಹಿತಿ ನೀಡಿದರು. ಮತದಾನ ದಿನದಂದು ಸಾರ್ವತ್ರಿಕ ರಜಾ ದಿನವಿದ್ದು, ಎಲ್ಲರೂ ಕಡ್ಡಾಯವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವಂತೆ ತಿಳಿಸಿದರು.
ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದ ಕೃಷಿ ಉಪ ನಿರ್ದೇಶಕ ಭಾನುಪ್ರಕಾಶ್, ಮತದಾನವು ನಮ್ಮೆಲ್ಲರ ಹಕ್ಕಾಗಿದ್ದು, ಪ್ರತಿಯೊಬ್ಬರು ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸುವಂತೆ ತಿಳಿಸಿದರು.
ಕೃಷಿ ಮಹಾ ವಿದ್ಯಾಲಯದ ಡೀನ್ ಮಾತನಾಡಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿರುವುದರಿಂದ ಶೇಕಡಾ ಮತದಾನ ಪ್ರಮಾಣವನ್ನು ಹೆಚ್ಚು ಮಾಡುವಲ್ಲಿ ಸಹಾಯಕವಾಗುತ್ತದೆ ಎಂದಲ್ಲದೆ ವಿವಿ ಪ್ಯಾಟ್ ಮೂಲಕ ಮತದಾನ ಮಾಡುವಾಗ ಕೆಲವರು ತಿಳಿಯದೇ ಯಾವುದೋ ಬಟನ್ ಒತ್ತುವುದರಿಂದ ಅವರ ಮತವು ಅಸಿಂಧುವಾಗುತ್ತದೆ. ಆದ್ದರಿಂದ ಮತದಾನ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿದು ಕಡ್ಡಾಯವಾಗಿ ಮತ ಚಲಾಯಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ವಿದ್ಯಾಥಿಗಳು ಸರತಿ ಸಾಲಿನಲ್ಲಿ ನಿಂತು ಅಣುಕು ಮತದಾನದಲ್ಲಿ ಪಾಲ್ಗೊಂಡು ಮತ ಚಲಾವಣೆ ಮಾಡುವ ಬಗ್ಗೆ ಹಾಗೂ ತಾವು ಹಾಕುತ್ತಿರುವ ಮತ ಅದೇ ಅಭ್ಯರ್ಥಿಗೆ ಹೋಗುವ ಬಗ್ಗೆ ತಿಳಿದು ಸ್ವಯಂ ದೃಡೀಕರಿಸಿಕೊಂಡರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿದೇಶಕರಾದ ರಾಜ ಸುಲೋಚನ, ಸಹಾಯಕ ಕೃಷಿ ನಿದೇಶಕ ಅಜಯ್, ಕೃಷಿ ಅಧಿಕಾರಿ ಸವಿತ, ಶಾಂತಿಗ್ರಾಮ ಗ್ರಾಮ ಪಂಚಾಯಿತಿ ಪಿಡಿಒ ರಮೇಶ್, ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.