ಕೊಣನೂರು: ಮತದಾನ ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದ್ದು, ವಿವೇಚನೆಯಿಂದ ಮತವನ್ನು ತಪ್ಪದೇ ಚಲಾಯಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಎಂ.ಎಸ್ ಗಿರಿಧರ ತಿಳಿಸಿದರು.
ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ ಮತ್ತು ಕೊಣನೂರು ಗ್ರಾಮಪಂಚಾಯತಿ ಸಹಭಾಗಿತ್ವದಲ್ಲಿ ಕಡ್ಡಾಯ ಮತದಾನದ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾನ ಮೂಲಕ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿ ದೇಶದ ಪ್ರಗತಿಗೆ ಸಹಕರಿಸಬೇಕು. ಮತದಾನ ನಮ್ಮ ಆಜನ್ಮ ಸಿದ್ದ ಹಕ್ಕು, ಮತದಾನ ಮಾಡಿ ಪ್ರಜಾತಂತ್ರ ಉಳಿಸಿ, ಹೆಂಡ ಹಣಕ್ಕಾಗಿ ನಿಮ್ಮ ಮತವನ್ನು ಮಾರಿಕೊಳ್ಳದೇ ಕಡ್ಡಾಯವಾಗಿ ಮತದಾನ ಮಾಡಿ ಎಂದರು.
ಪಿಡಿಒ ಪರಮೇಶ್ ಮಾತನಾಡಿ ಮತದಾನ ಸಂವಿದಾನಾತ್ಮಕ ಹಕ್ಕು, ತಪ್ಪದೇ ಮತ ಚಲಾಯಿಸಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಸಾರ್ವಜನಿಕರು ಸಹಕರಿಸಬೇಕು. 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದರು.
ಪಿಡಿಒ ಗಣೇಶ್ ಮಾತನಾಡಿ, ಭಾರತ ರಾಷ್ಟ್ರ ಒಟ್ಟಾರೆಯಾಗಿ ನಿಂತಿರುವುದೇ ಚುನಾವಣೆ ಎಂಬ ವ್ಯವಸ್ಥೆಯ ಮೇಲೆ, ಈ ವ್ಯವಸ್ಥೆಯ ಶಕ್ತಿಯೇ ಮತದಾರರು. ಹಾಗಾಗಿ ದೇಶದ ಯುವಶಕ್ತಿ ಮತದಾನದ ಬಗ್ಗೆ ಉನ್ನತ ಭಾವನೆಗಳನ್ನು ಹೊಂದಿದರೆ ಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ. ನಿಮ್ಮ ಸುತ್ತಮುತ್ತಲ ಎಲ್ಲಾ ಸಾರ್ವಜನಿಕರಿಗೂ ಕಡ್ಡಾಯ ಮತದಾನದ ಬಗ್ಗೆ ಪ್ರೇರೇಪಿಸಿದಾಗ ಮಾತ್ರ ನೂರಕ್ಕೆ ನೂರು ಮತದಾನ ಆಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ಗಣೇಶ, ಪರಮೇಶ, ಕಾರ್ಯದರ್ಶಿ ಮಂಜುನಾಥ, ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಬಸವರಾಜು, ಪ್ರಾಧ್ಯಾಪಕ ವೃಂದದವರು, ವಿದ್ಯಾರ್ಥಿಗಳು, ಗ್ರಾಮಪಂಚಾಯತಿಯ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.