ಹಾಸನ: ಬೆಟ್ಟಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಆಲೂರು ತಾಲೂಕಿನ ಸಿಂಗೋಡನಹಳ್ಳಿ, ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬೆಟ್ಟಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಗ್ರಾಮದಲ್ಲಿನ ಅಂಗಡಿಗಳಲ್ಲಿ ಮತ್ತು ಕೆಲ ಮನೆಗಳಲ್ಲಿ ನಿಯಮ ಬಾಹಿರವಾಗಿ ಮದ್ಯ ದಾಸ್ತಾನಿಟ್ಟು ಮಾರಾಟ ಮಾಡಲಾಗುತ್ತಿದೆ.
ಇದರಿಂದ ಮಧ್ಯಮ ಹಾಗೂ ಬಡ ವರ್ಗದ ಸಂಸಾರಗಳು ಹಾಳಾಗುತ್ತಿದ್ದು ಕೂಲಿ ಕೆಲಸ ಮಾಡಿ ಬಂದಂತಹ ಹಣವನ್ನು ಮದ್ಯಪಾನಕ್ಕೆ ವಿನಿಯೋಗಿಸುತ್ತಿರುವುದರಿಂದ ಮನೆಯಲ್ಲಿ ಗಲಾಟೆ ಸಾಮಾನ್ಯವಾಗಿದೆ. ಸಂಸಾರದಲ್ಲಿ ಸಾಮರಸ್ಯ ಇಲ್ಲದಂತಾಗಿದ್ದು ಬೆಟ್ಟಹಳ್ಳಿ ಗ್ರಾಮದಲ್ಲಿ ದಿನ ನಿತ್ಯ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಪುರುಷರು ಯುವಕರು ಮಧ್ಯಪಾನಕ್ಕೆ ದಾಸರಾಗುತ್ತಿದ್ದು ಸಂಸಾರಗಳ ನೆಮ್ಮದಿ ಹಾಳಾಗುತ್ತಿದೆ. ಆದ್ದರಿಂದ ಮದ್ಯ ಮಾರಾಟ ನಿಲ್ಲಿಸುವ ಸಂಬಂಧ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು.
ಗ್ರಾಮಸ್ಥರಾದ ಆಶಾ, ಕುಸುಮಾ, ಸುಜಾತಾ, ಸುನಿಲಕುಮಾರ, ಸದಾಶಿವ, ರಂಗನಾಥ, ತ್ಯಾಗರಾಜ, ದಿವಾಕರ, ಸತೀಶ ಇತರರು ಇದ್ದರು.