ಬೇಲೂರು: ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಗ್ರಾಮಸ್ಥರಿಗೆ ಬೆದರಿಕೆ ಹಿನ್ನೆಲೆಯಲ್ಲಿ ತಹಶೀಲ್ದಾರ ಎಂ. ಮಮತಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಕಬ್ಬಿನಮನೆ ಕಾಲೋನಿಯಲ್ಲಿ ಇತ್ತೀಚಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರವಾದವರಿಂದ ಹಿಂದೂ ಧರ್ಮದಲ್ಲಿ ಇದ್ದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ನಮಗೆ ಪ್ರತಿನಿತ್ಯ ಹಿಂಸೆ ಕೊಡುವುದರ ಜೊತೆಗೆ ನಾವು ನಮ್ಮ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಪೂಜೆ ಸಲ್ಲಿಸುತ್ತಿದ್ದ ಹಿಂದೂ ದೇವರಾದ ಗುರುಪಂಜರವಳ್ಳಿ ಹಾಗೂ ಐರವಳ್ಳಿ ಸ್ವಾಮಿಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸುಮಾರು 12 ಮನೆ ಕುಟುಂಬಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ ಎಂ. ಮಮತಾ ಗ್ರಾಮಸ್ಥರೊಂದಿಗೆ ಮಾತನಾಡಿ, ಪ್ರತಿಯೊಬ್ಬರು ಪರಸ್ಪರ ಅವರವರ ನಂಬಿಕೆಗಳಿಗೆ, ಸಂಪ್ರದಾಯಗಳಿಗೆ ಗೌರವ ನೀಡಬೇಕು. ಮೊದಲಿಗೆ ಎಲ್ಲರೂ ಮನುಷ್ಯರು, ಒಂದೇ ಗ್ರಾಮದಲ್ಲಿ ವಾಸ ಮಾಡುವಾಗ ಪರಸ್ಪರ ಹೊಂದಾಣಿಕೆಯಿಂದ, ಸಮನ್ವಯದಿಂದ ಜೀವನ ನಡೆಸಬೇಕು. ಯಾರಿಗೂ ಸಹ ನಂಬಿಕೆಗಳು, ಸಂಪ್ರದಾಯಗಳನ್ನು ಅನುಸರಿಸಿ ಎಂದು ಒತ್ತಡ ಮಾಡಬಾರದು. ಒಂದು ವೇಳೆ ಅಂತಹ ದೂರು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾನೂನು ಸುವ್ಯವಸ್ಥೆಗೆ ಭಂಗವುಂಟು ಮಾಡದಂತೆ ಎಲ್ಲಾ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ ಎಂದು ದೂರಿರುವ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿದರು ಹಾಗೂ ಸ್ಥಳವನ್ನು ತಕ್ಷಣವೇ ಸ್ವಚ್ಛಗೊಳಿಸಲು ತಿಳಿಸಿದ್ದಾರೆ.