ಹೊಳೆನರಸೀಪುರ: ತಾಲೂಕಿನ ಕಟ್ಟೆಹೊಸೂರು ಹಾಗೂ ಮಲ್ಲಸಮುದ್ರ ಗ್ರಾಮದ ಹಾಲು ಸಂಗ್ರಹಣಾ ಕೇಂದ್ರದಲ್ಲಿ ಸಂಗ್ರಹವಾಗುವ ಹಾಲಿನ ದರವನ್ನು ರಾಜಕೀಯ ಕಾರಣಕ್ಕಾಗಿ ಕಡಿಮೆ ಹಣ ಜಮೆಗೊಳಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಾದ್ಯಮಗಳಿಗೆ ಹೇಳಿಕೆ ನೀಡಿರುವ ಗ್ರಾಮದ ಹಾಲು ಉತ್ಪಾದಕರು ಖಾಸಗಿ ಡೈರಿಗಳತ್ತ ಮುಖ ಮಾಡಬೇಕಿರುವ ಅನಿವಾರ್ಯತೆ ಇದೆ ಎಂದು ಆಪಾದಿಸಿದರು. ರಾಜಕಾರಣಿಯೊಬ್ಬರು ಚುನಾವಣಾ ಸಂಬಂಧ ಗ್ರಾಮಕ್ಕೆ ಆಗಮಿಸಿದ್ದರಂತೆ, ಗ್ರಾಮ ಎಂದಮೇಲೆ ಎಲ್ಲ ಪಕ್ಷದವರೂ ಇರ್‍ತಾರೆ. ಗ್ರಾಮದ ಯುವಕರು ಯಾರೋ ವಿರೋಧ ಪಕ್ಷಕ್ಕೆ ಜೈಕಾರ ಹಾಕಿದರು ಎಂಬುದೇ ಇಲ್ಲಿನ ಡೈರಿಗೆ ರಾಜಕಾರಣ ಎಂಟ್ರಿ ಕೊಡಲು ಕಾರಣ ಎನ್ನುವುದು ಹಾಲು ಉತ್ಪಾದಕರ ವಿವರ. ಅಂದಿನಿಂದ ಸಂಘದ ಸದಸ್ಯರು ತಂದು ಹಾಕುವ ಪ್ರತಿ ಲೀ ಹಾಲಿಗೆ 32 ರೂ. ದರ ಜಮೆ ಆಗುತ್ತಿತ್ತು. ವಿರೋಧಾಭಾಸ ವ್ಯಕ್ತವಾದ ಪ್ರಭಾವ ಕಳೆದ 12 ದಿನಗಳಿಂದ ಹಾಲಿನಲ್ಲಿ ನೀರಿನ ಅಂಶ ಇದೆ ಎಂದು ಪ್ರತಿ ಲೀ. ಗೆ ಕೇವಲ 9 ರೂ. ಜಮಾ ಮಾಡುತ್ತಿದ್ದಾರೆ. ಸಂಬಂಧ ಪಟ್ಟ ಡೈರಿ ಕಾರ್ಯದರ್ಶಿ ಹಾಗೂ ಮೇಲ್ಮಟ್ಟದ ಡೈರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜವಾಗಲಿಲ್ಲ. ಬೇಸತ್ತು ದೂರದ ಮಾರಶೆಟ್ಟಿ ಹಳ್ಳಿಯಲ್ಲಿನ ಖಾಸಗಿ ಡೈರಿಗೆ ಅದೇ ಹಾಲು ಹಾಕುತ್ತಿದ್ದೇವೆ. ಅಲ್ಲಿ ಇದೇ ಹಾಲಿಗೆ 32 ರೂ ನೀಡುತ್ತಿದ್ದಾರೆ. ನಮ್ಮೂರಿನ ಡೈರಿಯಲ್ಲಿ ಬಾರದ ಹಾಲಿನ ಗುಣಮಟ್ಟ ಅಲ್ಲಿ ಹೇಗೆ ಬರಲು ಸಾದ್ಯ ಎಂದು ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರಾದ ಉಗ್ರೇಶ್, ಪರಮೇಶ್, ರವಿ, ಕೋಡಿಹಳ್ಳಿ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಹಲವಾರು ಆರೋಪಿಸಿದ್ದಾರೆ.
ನಮ್ಮೂರಿನ ಹಿರಿಯರು ಹೋರಾಟ ಮಾಡಿ ತಂದ ನಂದಿನಿ ಹೆಸರಿನ ಹಾಲು ಉತ್ಪಾದಕರ ಸಹಕಾರ ಸಂಘ ಇದೀಗ ಪ್ರಯೋಜನ ಕಂಡಿಲ್ಲದಾಗಿದೆ. ಬೆಳಗ್ಗೆ ಮತ್ತು ಸಂಜೆ ಮಾಡುವ ಕೆಲಸ ಬಿಟ್ಟು, ದೂರದ ಮಾರಶೆಟ್ಟಿಹಳ್ಳಿ ಗ್ರಾಮದ ಖಾಸಗಿ ಡೈರಿಗೆ ತೆರಳಿ ಹಾಲು ಹಾಕಿ ಬರುತ್ತಿದ್ದೇವೆ. ಇದೆಂತಾ ನೀಚ ರಾಜಕೀಯ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದರು.
ಸಹಕಾರ ಸಂಘದಲ್ಲಿ ಕಟ್ಟೆ ಹೊಸಹಳ್ಳಿ ಹಾಗೂ ಮಲ್ಲ ಸಮುದ್ರ ಎರಡೂ ಗ್ರಾಮದಿಂದ ಒಟ್ಟು 90 ಮಂದಿ ಹಾಲು ಉತ್ಪಾದಕ ಸದಸ್ಯರಿದ್ದಾರೆ. ಪ್ರತಿನಿತ್ಯ 8 ರಿಂದ 10 ಕ್ಯಾನ್ (ಪ್ರತಿ ಕ್ಯಾನ್ 30 ಲೀ) ಹಾಲು ಸಂಗ್ರಹವಾಗುತ್ತಿತ್ತು. ರೈತರಿಗೆ ಆರ್ಥಿಕ ಚೇತರಿಕೆ ತಂದುಕೊಡುತ್ತಿದ್ದ ಹೈನೋದ್ಯಮ ಅವಲಂಬಿಸಿರುವ ನಮ್ಮ ಮೇಲೆ ಈ ರೀತಿ ಡೈರಿ ಅಸ್ತ್ರ ಪ್ರಯೋಗಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಧಿ ಇಲ್ಲದೆ ಖಾಸಗಿ ಡೈರಿ ತೆರೆಯಲು ಯೋಚಿಸುತ್ತಿದ್ದೇವೆ ಎಂದು ಎಚ್ಚರಿಸಿದ್ದಾರೆ. ಗ್ರಾಮಸ್ಥರ ಆರೋಪಕ್ಕೆ ಪ್ರತಿಕ್ರಿಯೆ ಕೇಳಲು ಕರೆ ಮಾಡಿದಾಗ, ಕಾರ್ಯದರ್ಶಿ ಸ್ಥಳಕ್ಕೆ ಬಾರದೇ ನಿರಾಕರಿಸಿದರು.