ಹೊಳೆನರಸೀಪುರ: ತಾಲೂಕಿನ ಬಡಕ್ಯಾತನಹಳ್ಳಿ ಗ್ರಾಮದಲ್ಲಿ ಗುಣಮಟ್ಟ ಕಾಯ್ದುಕೊಳ್ಳದೆ, ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಸಿದ್ದು, ವಾಸದ ಮನೆ ಸಮೀಪಕ್ಕೆ ಚರಂಡಿ ನೀರು ಹರಿದು ಪಜೀತಿ ಉಂಟು ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಹಳ್ಳಿ ಮೈಸೂರು ಹೋಬಳಿಯ ಬಡಕ್ಯಾತನಹಳ್ಳಿ ಗ್ರಾಮದಲ್ಲಿ ಪಿಡ್ಬ್ಲೂಡಿ ಇಲಾಖೆ ವತಿಯಿಂದ ಗ್ರಾಮ ಪರಿಮಿತಿ ಯೋಜನೆಯಡಿ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಜತೆಗೆ ಚರಂಡಿ ಮಾಡಲಾಗಿದೆ. ಗುಣಮಟ್ಟ ಕಾಯ್ದುಕೊಂಡಿಲ್ಲ ಎಂದು ಬಿಜೆಪಿ ಮುಖಂಡ ದೇವರಮುದ್ದನಹಳ್ಳಿ ಶಿವಣ್ಣ ದೂರಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಣ್ಣು ತುಂಬಿದ್ದರಿಂದ ಚರಂಡಿ ನೀರು ಹರಿವಿಲ್ಲ. ಇದರಿಂದ ಯುಜಿಡಿ ನೀರು ಸಹ ನಿಂಗರಾಜು ಮತ್ತು ಕೃಷ್ಣಯ್ಯ ಎಂಬುವರ ಮನೆ ಮುಂದೆ ಹರಿದು ನಿಲ್ಲುತ್ತಿದೆ. ಜನರು ಮೂಗು ಮುಚ್ಚಿ ತಿರುಗಾಡಬೇಕಾದ ಸ್ಥಿತಿ ಇದೆ. ರಸ್ತೆಗೆ ಹಾಕಿರುವ ಕಾಂಕ್ರೀಟ್ ಸೀಮೆಂಟ್ ನಿಗದಿತ ಪ್ರಮಾಣದಲ್ಲಿ ಹಾಕಲಾಗಿಲ್ಲ. ಇದರಿಂದ ಹೆಚ್ಚು ದಿನ ಬಾಳಿಕೆ ಬರುವಂತೆ ಕಾಣುತ್ತಿಲ್ಲ. ಗ್ರಾಮದಲ್ಲಿ ಹಾಲು ಉತ್ಪಾದಕರರ ಕೇಂದ್ರ ಇದೆ. ಜನ, ಜಾನುವಾರುಗಳು ತಿರುಗಾಡುವ ಇಲ್ಲಿ ಸಮರ್ಪಕ ರಸ್ತೆ ಅಗತ್ಯ ಇತ್ತು. ಚರಂಡಿ ಕಾಮಗಾರಿ ಸಹ ಅಸಮರ್ಪಕವಾಗಿ ಮಾಡಲಾಗಿದೆ. ಇದರಿಂದ ಜನರು ಹೈರಾಣಾಗುವಂತೆ ಮಾಡಿದ್ದಾರೆ. ಗುತ್ತಿಗೆ ನಿರ್ವಹಿಸಿದವರನ್ನು ಕೇಳಿದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಇಂಜಿನಿಯರ್‌ಗಳ ಗಮನಕ್ಕೆ ತರಲಾಗಿದ್ದರೂ ಗಮನ ಹರಿಸಿಲ್ಲ ಎಂದಿದ್ದಾರೆ.