ಹಾಸನ: ನಗರದ ಕೆ.ಆರ್ ಪುರಂನ 5ನೇ ವಾರ್ಡ್‌ನಲ್ಲಿನ ಅಸಮರ್ಪಕ ಒಳಚರಂಡಿ ವ್ಯವಸ್ಥೆ ಕಾರಣ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಹಲವು ವರ್ಷದಿಂದ ಇಲ್ಲಿನ ನಿವಾಸಿಗಳು ಒಳಚರಂಡಿ ಅವ್ಯವಸ್ಥೆ ಕುರಿತು ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಳಚರಂಡಿ ನೀರು ವಠಾರದಲ್ಲಿ ಉಕ್ಕಿ ಹರಿಯುತ್ತಿದ್ದು, ರಸ್ತೆ ಸೇರಿದಂತೆ ಮನೆಯೊಳಗೆ ನುಗ್ಗುವ ಕಲುಷಿತ ನೀರಿನಿಂದ ಪರಿಸರ ಗಬ್ಬುನಾರುವಂತಾಗಿದೆ. ಜಂಬೂ ಕಿಡ್ಸ್ ಶಾಲೆ, ಎಂಟು ಮನೆ ವಠಾರ, ನಾರಾಯಣ ಸ್ವಾಮಿ ಹಾಗೂ ಮಧು ಅವರ ಮನೆಯ ಸುತ್ತಮುತ್ತ ಇದೇ ಪರಿಸ್ಥಿತಿ ಇದೆ. ಗಜಾನನ ಹೋಟೆಲ್‌ನ ಯುಜಿಡಿ ಹಾಗೂ ಮೋರಿಯ ಅಸಮರ್ಪಕ ನಿರ್ವಹಣೆಯೂ ಇದಕ್ಕೆ ಕಾರಣ ಇರಬಹುದು ಎಂದು ನಿವಾಸಿಗಳು ತಿಳಿಸಿದ್ದಾರೆ.
ಈ ಸಮಸ್ಯೆ ಸಂಬಂಧ ವಾರ್ಡ್‌ನ ಕೌನ್ಸಿಲರ್ ಅವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ನಗರಸಭೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸಲು ನಿವಾಸಿಗಳು ಒತ್ತಾಯಿಸಿದ್ದಾರೆ.