ಸಕಲೇಶಪುರ: ಮಲೆನಾಡು ಭಾಗದಲ್ಲಿ ಮಿತಿ ಮೀರಿರುವ ಕಾಡಾನೆ ಹಾವಳಿಗೆ ನಿಯಂತ್ರಣ ಹಾಕಲು ಅರಣ್ಯ ಇಲಾಖೆ ವತಿಯಿಂದ 2 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯ ಸೋಮವಾರ ನಡೆಯಿತು.
ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಗೆ ಸರ್ಕಾರ ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಹಾಕಲು ಅನುಮತಿ ಕೊಟ್ಟಿದ್ದು, ಈ ನಿಟ್ಟಿನಲ್ಲಿ ಕಾಡಾನೆಗಳಿಗೆ ಅರಣ್ಯ ಇಲಾಖೆ ವತಿಯಿಂದ ರೇಡಿಯೋ ಕಾಲರ್ ಹಾಕುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಸೋಮವಾರ ಮುಂಜಾನೆಯಿಂದ ಅಭಿಮನ್ಯು ನೇತೃತ್ವದಲ್ಲಿ ಪ್ರಶಾಂತ, ಭೀಮ, ಮಹೇಂದ್ರ, ಅಜೇಯ ಸಾಕಾನೆಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಕೆರೋಡಿ ಸಮೀಪದ ಬೀಡುಬಿಟ್ಟಿದ್ದ ಸುಮಾರು 10ಕ್ಕೂ ಹೆಚ್ಚು ಕಾಡಾನೆ ಗುಂಪನ್ನು ಚದುರಿಸಿ ಓಲ್ಡ್ ಬೆಲ್ಟ್ ಕಾಡಾನೆ ಸಂಚಾರದ ಕುರಿತು ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ, ಓಲ್ಡ್ ಬೆಲ್ಟ್ ಹೆಣ್ಣು ಕಾಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುತ್ತಲೇ ಸುಮಾರು ದೂರ ಹೋಗಿ ಮಾಗಲು ಕಾಫಿ ಎಸ್ಟೇಟ್ ಮಧ್ಯೆ ಹೋಗಿ ನಿಂತಿತು. ಕೂಡಲೇ ಸುತ್ತುವರಿದ ಸಾಕಾನೆಗಳ ನೆರವಿನಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಳೆಯ ರೇಡಿಯೋ ಕಾಲರ್ ತೆಗೆದು ಹೊಸ ರೇಡಿಯೋ ಕಾಲರ್ ಅಳವಡಿಸಿ ಬಳಿಕ ಕಾಡಾನೆಯನ್ನು ಅಲ್ಲಿಯೇ ಬಿಡಲಾಯಿತು.
ಈ ಹಿಂದೆ ಕಾಲರ್ ಐಡಿ ಅಳವಡಿಸಲಾಗಿದ್ದು, ಅದರೆ ಹಳೆಯ ಕಾಲರ್ ಐಡಿ ನಿಷ್ಕ್ರಿಯವಾಗಿದ್ದರಿಂದ ಹೊಸ ಕಾಲರ್ ಐಡಿಯನ್ನು ಓಲ್‌ಡ್ ಬೆಲ್‌ಟ್ ಕಾಡಾನೆಗೆ ಅಳವಡಿಸಲಾಯಿತು. ಇದಾದ ನಂತರ ಸಕಲೇಶಪುರ ತಾಲೂಕು ಗಡಿಭಾಗ ಬೇಲೂರು ಬ್ಯಾದನೆ ಸಮೀಪದ ಕಾಫಿ ತೋಟವೊಂದರಲ್ಲಿ ಇದ್ದ ಭುವನೇಶ್ವರಿ ಕಾಡಾನೆಗೆ ಸತತ ಕಾರ್ಯಾಚರಣೆ ನಡೆಸಿ ಕಾಲರ್ ಐಡಿ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಾಚರಣೆ ಕುರಿತು ಡಿ.ಎ.ಓ ಹರೀಶ್ ಮಾತನಾಡಿ ಮೂರು ಕಾಡನೆಗಳಿಗೆ ರೇಡಿಯೋ ಕಾಲರ್ ಐಡಿ ಅಳವಡಿಸಲು ಅನುಮತಿ ದೊರಕಿದ್ದು, ಇದರಿಂದ ಕಾಡಾನೆಗಳ ಸಂಪೂರ್ಣ ಗುಂಪಿನ ಮೇಲೆ ನಿಗಾವಿಡಲು ಅನುಕೂಲವಾಗುತ್ತದೆ. ಜನರ ಜೀವ ಉಳಿಸೋ ಸಲುವಾಗಿ ನಾವು ರೇಡಿಯೋ ಕಾಲರ್ ಅಳವಡಿಸಿದ್ದೇವೆ. ರೇಡಿಯೋ ಕಾಲರ್ ಅಳವಡಿಕೆಯಿಂದ ಕಾಡಾನೆಗಳ ಚಲನವಲನದ ಮೇಲೆ ನಿಗವಿಟ್ಟು ಜನರಿಗೆ ಹಾಗೂ ರೈತರಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ. ಮಂಗಳವಾರ ಹೆಬ್ಬನಹಳ್ಳಿ ಸುತ್ತಮುತ್ತ ಸಂಚರಿಸುತ್ತಿರುವ ಕಾಂತಿ ಎಂಬ ಕಾಡಾನೆಗೆ ರೇಡಿಯೋ ಕಾಲರ್ ಐಡಿ ಅಳವಡಿಸಲಾಗುತ್ತದೆ ಹಾಗೂ ಸರ್ಕಾರದಿಂದ ಅಧಿಕೃತ ಆದೇಶ ಬಂದ ಮೇಲೆ 2 ಕಾಡಾನೆಗಳನ್ನು ಹಿಡಿಯಲಾಗುತ್ತದೆ ಎಂದರು.