ಬೇಲೂರು: ವಿಶ್ವ ಪ್ರಸಿದ್ದ ಪ್ರವಾಸಿತಾಣ ಬೇಲೂರು ಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಲ್ಲಿಯೇ ಇತ್ತೀಚಿನ ದಿನದಲ್ಲಿ ತಿಂಡಿ-ತಿನಿಸುಗಳ ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ನಾಯಿ ಕೊಡೆಯಂತೆ ತಲೆ ಎತ್ತಿರುವ ತಿಂಡಿ ಗಾಡಿಗಳಿಂದ ಅಸ್ವಸ್ಥತೆ ತಾಣವಾಗುತ್ತಿದೆ. ಬರುವ ಪ್ರವಾಸಿಗರು ಕೂಡ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ದೇಗುಲದಿಂದ ದೂರದಲ್ಲಿ ತಿಂಡಿ ತಿನಿಸುಗಳ ಮಾರಾಟಕ್ಕೆ ದೇಗುಲದ ಆಡಳಿತ ಮುಂದಾಗಬೇಕಿದೆ ಎಂದು ಸ್ಥಳೀಯ ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಲೂರು ಚನ್ನಕೇಶವಸ್ವಾಮಿ ದೇಗುಲದಲ್ಲಿನ ಶಿಲ್ಪಕಲಾ ವೈಭವ ವೀಕ್ಷಿಸಲು ನಿತ್ಯ ಸಾವಿರಾರು ಪ್ರವಾಸಿಗರು ದೇಶ-ವಿದೇಶದಿಂದ ಬರುವ ವಾಡಿಕೆ ಇದೆ. ಅಂತೆಯೇ ದೇಗುಲ ಅವರಣ ಮತ್ತು ಸುತ್ತ ಮುತ್ತಲಿನ ಪರಿಸರ ಸ್ವಚ್ಚತೆಗೆ ಒತ್ತು ನೀಡಬೇಕಾದ ಕರ್ತವ್ಯ ದೇಗುಲದ ಆಡಳಿತಕ್ಕೆ ಸಂಬಂಧ ಪಡುತ್ತದೆ. ಆದರೆ ದೇಗುಲ ಆಡಳಿತ ರಥೋತ್ಸವ ಜಾತ್ರಾ ಮಹೋತ್ಸದ ಬಳಿಕ ದೇಗುಲ ರಾಜ ಗೋಪುರದಿಂದ ದೂರದಲ್ಲಿ ವ್ಯಾಪಾರ ಮಾಡುತ್ತಿದ್ದ ಚರಮುರಿ, ಸೌತೆಕಾಯಿ, ಕಲ್ಲಂಗಡಿ, ಮಾವಿನಕಾಯಿ, ಎಳೆನೀರು, ಪಾನಿಪುರಿ ಸೇರಿದಂತೆ ನಾನಾ ತಿಂಡಿ ತಿನಿಸುಗಳು ಮಾರಾಟ ಇತ್ತೀಚಿನ ದಿನದಿಂದ ಯಾರ ಅಂಕೆ ಶಂಕೆ ಇಲ್ಲದೆ ರಾಜಗೋಪುರ ಮೆಟ್ಟಿಲು ಬಳಿ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಸೌತೆಕಾಯಿ, ಎಳನೀರು ಮತ್ತು ಇನ್ನಿತರ ತಿಂಡಿಗಳ ತ್ಯಾಜ್ಯದಿಂದ ದೇಗುಲದ ಮುಂದೆ ಅಸ್ವಸ್ಥತೆ ತಾಣವಾಗುತ್ತಿದೆ. ಈ ಬಗ್ಗೆ ದೇಗುಲದ ಆಡಳಿತ ಮತ್ತು ಪುರಾತತ್ವ ಇಲಾಖೆ ಗಮನ ನೀಡಬೇಕು ಎಂದು ಸ್ಥಳೀಯ ಭಕ್ತರು ಪತ್ರಿಕೆಯೊಂದಿಗೆ ತಿಳಿಸಿದರು.
ಅಲ್ಲದೇ ಪಾರ್ಕಿಂಗ್ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಬೇಕಾಬಿಟ್ಟಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುವ ಮೂಲಕ ಟ್ರಾಫಿಕ್ ಗೆ ಕಾರಣವಾಗಿದ್ದಾರೆ. ಇದರಿಂದ ಸ್ಥಳೀಯರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಕೆಲವು ಬಾರಿ ಸಣ್ಣ ಪುಟ್ಟ ಅಪಘಾತಕ್ಕೆ ಕಾರಣ ಆಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರವೇ ದೇಗುಲದ ಹಿಂಭಾಗದ ಪಾರ್ಕಿಂಗ್ ಸ್ಥಳಕ್ಕೆ ನಿಲುಗಡೆ ಮಾಡಲು ದೇಗುಲ ಆಡಳಿತ ಮುಂದಾಗಬೇಕಿದೆ. ವಿಶೇಷವಾಗಿ ಇಲ್ಲಿನ ತಿಂಡಿ ತಿನಿಸುಗಳ ಗಾಡಿ ಅಂಗಡಿಗಳು ತಮ್ಮದೇ ಕಾರುಬಾರು ಎಂದೇ ಒಂದೇ ಮನೆಯ ಮೂರು ನಾಲ್ಕು ಗಾಡಿಗಳ ಮೂಲಕ ಇನ್ನೊಬ್ಬರಿಗೆ ಅವಕಾಶ ನೀಡುತ್ತಿಲ್ಲ. ಬರುವ ಪ್ರವಾಸಿಗರಿಗೆ ಗುಣಮಟ್ಟದಿಂದ ಕೂಡಿದ ಆಹಾರ ಪದಾರ್ಥಗಳನ್ನು ನೀಡುತ್ತಿಲ್ಲ. ಕೇಳಿದರೆ ಉಡಾಪೆಯಿಂದ ವರ್ತಿಸುತ್ತಾರೆ ಎಂದು ಮೈಸೂರಿನ ಪ್ರವಾಸಿಗ ಚಿದಾನಂದ ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಒಟ್ಟಾರೆ ಚುನಾವಣೆ ನೀತಿ ಸಂಹಿತೆ ಇರುವ ಕಾರಣದಿಂದ ಹಾಗೂ ಇಲ್ಲಿನ ಕಾರ್ಯನಿರ್ವಾಹಕ ಅಧಿಕಾರಿ ಬೇರೆಡೆಗೆ ವರ್ಗಾವಣೆಯಾದ ಬಳಿಕ ದೇಗುಲದ ಆಡಳಿತ ಜವಾಬ್ದಾರಿ ಬೇಲೂರು ತಹಶೀಲ್ದಾರ ಎಂ.ಮಮತ ವಹಿಸಿಕೊಂಡಿದ್ದು, ಅವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.