ಬೇಲೂರು: ಬೇಲೂರಿನಲ್ಲಿ ರಾಜಕಾರಣ ಮಾಡುವ ಸಲುವಾಗಿ ವಿಶ್ವ ವಿಖ್ಯಾತವಾಗಿರುವ ಚನ್ನಕೇಶವ ದೇಗುಲ ಸ್ಥಳವನ್ನು ತೀವ್ರ ವಿವಾದಗ್ರಸ್ತವನ್ನಾಗಿ ಮಾಡಿರುವವರನ್ನು ಗಡಿಪಾರು ಮಾಡುವಂತೆ ಪ್ರಗತಿಪರ ಸಂಘಟನೆಗಳಿಂದ ಆಗ್ರಹಿಸಿದ್ದಾರೆ.
ಜೂನಿಯರ್ ಕಾಲೇಜು ಮೈದಾನದಿಂದ ಚೆನ್ನಕೇಶವ ದೇಗುಲದವರೆಗೂ ಜಾಥ ನಡೆಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮಿ ಗೌಡ, ಬೇಲೂರಿಗೆ ಕೆಲವರು ಎಲ್ಲಿಂದಲೊ ಬಂದು ಇಲ್ಲಿ ರಾಜಕಾರಣ ಮಾಡಿ ಕೋಮುಭೇದ ಸೃಷ್ಟಿಸಿಕೊಂಡು ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ಅದರಲ್ಲೂ ಚನ್ನಕೇಶವ ಸ್ವಾಮಿರಥೋತ್ಸವ ಸಂದರ್ಭದಲ್ಲಿ ಮುಸ್ಲಿಂ ಖಾಜಿಗಳು ಕುರಾನ್ ಪಠಣ ಮಾಡಬಾರದು ಎಂದು ವಿವಾದ ಮಾಡಿದ್ದಾರೆ. ಇವರ ಉದ್ದೇಶ ಬೇಲೂರನ್ನು ವಿವಾದಗ್ರಸ್ತ ಸ್ಥಳ ಮಾಡಬೇಕೆನ್ನುವುದು ಇವರ ನಡೆಯಾಗಿದೆ. ಬೇಲೂರಿನ ಜನ ಇಂತವರಿಗೆ ಮಣೆ ಹಾಕುವ ಜನರಲ್ಲ, ಇಲ್ಲಿ ನಾವೆಲ್ಲರೂ ಒಂದೇ ಇದ್ದೇವೆ. ಐಕ್ಯತೆಯಿಂದ ಜೀವನ ಸಾಗಿಸುತ್ತಿದ್ದೇವೆ. ಸುಮಾರು ೩೫೦ ವರ್ಷಗಳಿಂದ ಕುರಾನ್ ಪಠಣ ಮಾಡಿಕೊಂಡು ಬರುತ್ತಾ ಇದ್ದಾರೆ. ಮುಂದೆ ಕೂಡ ಅದನ್ನು ನೆರವೇರಿಸಿಕೊಂಡು ಹೋಗಲಿದ್ದು, ಅದಕ್ಕಾಗಿ ನಾವು ಶಾಂತಿಸೌಹಾರ್ದತೆಗಾಗಿ ಈ ನಡಿಗೆಯನ್ನು ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ತಹಶೀಲ್ದಾರ್ ಎಂ.ಮಮತ ಅವರಗೆ ಮನವಿ ನೀಡಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ ವಿಶ್ವ ಪ್ರಸಿದ್ದ ಬೇಲೂರು ಚನ್ನಕೇಶವ ಸ್ವಾಮಿ ದೇವಾಲಯವು ಲೋಕಾರ್ಪಣೆಗೊಂಡು ೯ ಶತಮಾನಗಳು ಕಳೆದಿದ್ದು, ಅಂದಿನಿಂದ ಇಲ್ಲಿಯವರೆಗೆ ಊರಿನ ಸಂಪ್ರದಾಯದಂತೆ ಚನ್ನಕೇಶವನ ಬ್ರಹ್ಮ ರಥೋತ್ಸವ ಜಾತ್ರಾ ಮಹೋತ್ಸವವು ಪ್ರತಿವರ್ಷವು ನಿರಂತರವಾಗಿ ಇಲ್ಲಿಯವರೆಗೂ ನಡೆದುಕೊಂಡು ರಥೋತ್ಸವ ಪ್ರಾರಂಭಕ್ಕೂ ಮುನ್ನ ಬೇಲೂರು ತಾಲೂಕಿನ ದೊಡ್ಡಮೇದೂರು ಗ್ರಾಮದ ಮುಸ್ಲಿಂ ಖಾಜಿರವರು ರಥದ ಮುಂಭಾಗ ಮುಜರೆ ವಂದನೆ ಮಾಡಿಕೊಂಡು ಭಾವೈಕ್ಯತೆಯ ಸಂದೇಶ ಸಾರುತ್ತಿರುವುದು ಇಡೀ ವಿಶ್ವಕ್ಕೆ ತಿಳಿದ ವಿಷಯವಾಗಿದೆ.
ಆದರೆ ಇತ್ತೀಚೆಗೆ ಬೇಲೂರು ತಾಲೂಕಿಗೆ ರಾಜಕೀಯ ಮಾಡುವ ಸಲುವಾಗಿ ಬಂದು ಹಿಂದು ಸಂಘಟನೆಗಳ ಹೆಸರಿನಲ್ಲಿ ಸರ್ವ ಧರ್ಮಗಳ ಜನರ ಭಾವನೆಗಳಿಗೆ ದಕ್ಕೆ ತಂದು ತಮ್ಮ ಸ್ವಹಿತಾಸಕ್ತಿಗಾಗಿ ಚನ್ನಕೇಶವನ ಭಕ್ತರ ಭಾವನೆಗಳಿಗೆ ದಕ್ಕೆ ಬರುವಂತೆ ಶ್ರೀ ಚನ್ನಕೇಶವನನ್ನು ದಾಸ್ಯದಿಂದ ಮುಕ್ತಗೊಳಿಸಲು ಬನ್ನಿ ಹಿಂದು ಬಾಂಧವರು ಎಂದು ಕರಪತ್ರಗಳನ್ನು ಬೇಲೂರಿನ ಜನತೆಗೆ ಹಂಚುವುದರ ಜೊತೆಗೆ ಮುಂಬರುವ ರಥೋತ್ಸವದಲ್ಲಿ ರಥದ ಮುಂದೆ ಮುಜರ ವಂದನೆ ಪಠಣ ಮಾಡಬಾರದೆಂದು ಪ್ರತಿಭಟನೆ ಸಹ ನಡೆಸಿರುತ್ತಾರೆ. ಆ ಕಾರಣ ಚನ್ನಕೇಶವ ದೇವರನ್ನು ದಾಸ್ಯದಿಂದ ಬಿಡಿಸೊಣ ಬನ್ನಿ ಎಂಬ ಹೇಳಿಕೆಯು ಕೇಶವನ ಸದ್ಭಕ್ತರ ಭಾವನೆಗಳಿಗೆ ತಿವ್ರ ದಕ್ಕೆಯುಂಟಾಗಿದ್ದು ತಾಲೂಕಿನ ಜನತೆ ಶಾಂತಿಪ್ರಿಯರಾಗಿದ್ದು ಸರ್ವಧರ್ಮ ಸಹಿಷ್ಣುಗಳು ಆಗಿರುವುದರಿಂದ ಈ ಶಾಂತಿ ಕದಡುವವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ಪ್ರಗತಿ ಪರ ಸಂಘಟನೆಗಳು ಸೇರಿ ಶಾಂತಿಗಾಗಿ ಸೌಹಾರ್ದಯುತ ನಡಿಗೆ ಜಾಥವನ್ನು ನಡೆಸಲಾಗಿದೆ ಎಂದರು.
ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬೇಲೂರಿನಲ್ಲಿ ಜಾತಿಗಳ ನಡುವೆ ಕಲಕುವಂತೆ ಕೆಲಸ ಮಾಡುತ್ತಿರುವ ಸಂಶೋಧಕ ಶ್ರೀವತ್ಸ ಎಸ್ ವಟಿ ಹಾಗೂ ಸಂತೋಷ್ ಕೆಂಚಂಬ ಇವರಿಬ್ಬರನ್ನು ಗಡಿಪಾರು ಮಾಡಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದತೆ ಸಿಪಿಐ ರವಿಕಿರಣ್, ಶ್ರೀಕಾಂತ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಕರವೇ ನಾರಾಯಣ ಗೌಡ ಬಣದ ಅಧ್ಯಕ್ಷ ಚಂದ್ರಶೇಖರ್, ರಾಜ್ಯ ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್, ಜಯಕರ್ನಾಟಕ ಸಂಘದ ಅಧ್ಯಕ್ಷ ರಾಜು, ಮಾನವ ಹಕ್ಕು ಹೋರಾಟ ನಿಂಗರಾಜು, ದಲಿತ ಸಂಘರ್ಷ ಸಮಿತಿಯ ಧರ್ಮಯ್ಯ, ವೀರಕನ್ಬಡಿಗ ಟಿಪ್ಪು ಸೇನೆಯ ನೂರ್ ಅಹಮದ್, ಟಿಫ್ಪು ಸಂಘರ್ಷ ಸಮಿತಿ ಜಾಕೀರ್ ಪಾಷಾ, ಸವಿತಾ ಸಮಾಜದ ಕೋಟೆ ಪ್ರಕಾಶ್, ಮುಖಂಡರಾದ ಬಿ.ಎಲ್.ಧರ್ಮೇಗೌಡ, ವೆಂಕಟೇಶ್, ಪುರಸಭಾ ಮಾಜಿ ಸದಸ್ಯ ಜುಬೇರ್, ಮುಸ್ಲಿಂ ಬಾಂಧವರು ಹಾಜರಿದ್ದರು.