ಸಕಲೇಶಪುರ: ವಸತಿರಹಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡುವ ಸಂಬಂಧ ಮಿನಿ ವಿಧಾನಸೌದದಲ್ಲಿ ಶಾಸಕ ಎಚ್. ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಹಲವು ದಶಕಗಳಿಂದ ತಾಂತ್ರಿಕ ಕಾರಣದಿಂದ ಅರ್ಹರಿಗೆ ಸೂರು ಕಲ್ಪಿಸಲು ಸಾಧ್ಯವಾಗಿರಲಿಲ್ಲ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ಅರ್ಹರಿಗೆ ಸೂರು ನೀಡಲು ಪ್ರಯತ್ನಿಸಲಾಗುವುದು. ಸೂರು ನೀಡುವ ಸಂಧರ್ಭದಲ್ಲಿ ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು, ಕೊಳೆಗೇರಿ ನಿವಾಸಿಗಳು, ಬೀದಿ ವ್ಯಾಪಾರಿಗಳು, ಕರಕುಶಲ ಕರ್ಮಿಗಳು, ಆಟೊ ಚಾಲಕರು, ಗುತ್ತಿಗೆ ಪೌರ ಕಾರ್ಮಿಕರು ವಿಧವೆಯರು ಹಾಗೂ ಮನೆಕೆಲಸ ಮಾಡುವ ಕಾರ್ಮಿಕರಿಗೆ ಆದ್ಯತಾನುಸಾರ ಹಂಚಿಕೆ ಮಾಡಬೇಕಾಗುತ್ತದೆ ಎಂದರು.
ಹೆಬ್ಬಸಾಲೆಯಲ್ಲಿ ಖರೀದಿ ಮಾಡಿರುವ 16 ಎಕರೆ ಜಾಗದಲ್ಲಿ 5 ಎಕರೆ ಜಾಗದ ಕುರಿತು ಪ್ರಕರಣ ನ್ಯಾಯಾಲಯದಲ್ಲಿದೆ. ಆ ಜಾಗದ ಆದೇಶ ಬರೋವರೆಗೂ ಯಾವುದೇ ರೀತಿಯಲ್ಲಿ ನಿವೇಶನ ನೀಡಲು ಆಗೋಲ್ಲ. ಒಟ್ಟು ಉಳಿದ 11 ಎಕರೆ ಜಾಗದಲ್ಲಿ ನಿವೇಶನ ರಹಿತರಿಗೆ 2೦*3೦ ಆಡಿ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಸತಿ ರಹಿತರ ಹೋರಾಟ ಸಮಿತಿ ವತಿಯಿಂದ ಸತತವಾಗಿ ಆರು ದಿನಗಳು ಪುರಭವನದ ಮುಂಬಾಗ ವಸತಿ ರಹಿತರಿಗೆ ವಸತಿ ಕಲ್ಪಿಸುವಂತೆ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಶಾಸಕರು ಮುಂದಿನ ದಿನಗಳಲ್ಲಿ ಅಶ್ರಯ ಸಮಿತಿಯ ಸಭೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ಮುಷ್ಕರ ಹಿಂಪಡೆಯಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಕಾಡಪ್ಪ, ತಹಶೀಲ್ದಾರ ಮೇಘನಾ, ಕಾರ್ಯ ನಿರ್ವಣಾಧಿಕಾರಿ ವೆಂಕಟೇಶ, ಮುಖ್ಯಾಧಿಕಾರಿ ಮಂಜುನಾಥ, ಕಂದಾಯ ಇಲಾಖೆಯ ಉಮೇಶ ಮುಂತಾದವರು ಹಾಜರಿದ್ದರು.