ಬೇಲೂರು: ನಿರ್ಗತಿಕರು, ಬಡವರು, ಹಾಗೂ ಕೂಲಿ ಕಾರ್ಮಿಕರಿಗಾಗಿ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯಿಂದ ಕೂಡಿದ್ದು, ತಕ್ಷಣ ಸರಿಪಡಿಸದೆ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಗುತ್ತದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.
ಹರ್ಡಿಕರ್ ವೃತ್ತದ ಎದುರು ಇರುವ ಇಂದಿರಾ ಕ್ಯಾಂಟೀನ್‌ಗೆ ಪುರಸಭೆ ಸದಸ್ಯರೊಂದಿಗೆ ದಿಢೀರ್ ಭೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ನೋಡಿ ನಂತರ ಸುದ್ಧಿಗಾರರ ಜೊತೆ ಮಾತನಾಡಿದ ಅವರು ಕ್ಯಾಂಟೀನ್ ಅಲ್ಲಿ ನೌಕರರಿಲ್ಲದೆ ಕೇವಲ ಒಬ್ಬರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಅಡುಗೆಗೆ ಬಳಸುವ ತರಕಾರಿಗಳು ಕೆಟ್ಟಿದ್ದು, ಸಾರು ರುಚಿ ಇಲ್ಲದೆ ಇರುವುದು ಕಂಡು ಬಂದಿದೆ. ಶೌಚಾಲಯ ಗಬ್ಬು ನಾರುತ್ತಿದ್ದು, ಅಡುಗೆ ಮನೆ ಸ್ವಚ್ಛತೆ ಕಾಣದೆ ಇದ್ದುದ್ದು ಕಂಡು ಬಂದಿದೆ.
ಬಡವರಿಗೆ, ನಿರ್ಗತಿಕರಿಗೆ, ಹಾಗೂ ಕೂಲಿ ಕಾರ್ಮಿಕರಿಗೆ ಅಲ್ಲದೆ ಸಾರ್ವಜನಿಕರು ಊಟ, ತಿಂಡಿ ಮಾಡಲು ಬರುತ್ತಾರೆ. ಸರ್ಕಾರ ಗುಣಮಟ್ಟದ ಆಹಾರ ನೀಡಬೇಕೆಂದು ಟೆಂಡರ್ ಕೊಟ್ಟಿದ್ದರೂ ಇವರು ಕಳಪೆ ಆಹಾರ ನೀಡುತ್ತಿದ್ದಾರೆ. ಅಲ್ಲದೆ ಕ್ಯಾಂಟೀನನ್ನು ಸ್ವಚ್ಛತೆಯಾಗಿ ನೋಡಿಕೊಳ್ಳದೆ ಇರುವುದರಿಂದ ಇವರಿಗೆ ನಮ್ಮ ಪುರಸಭೆ ವತಿಯಿಂದ ನೋಟೀಸ್ ನೀಡುತ್ತೇವೆ. ಸರಿಪಡಿಸಿಕೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಇವರ ವಿರುದ್ಧ ಪತ್ರ ಬರೆಯಲಾಗುವುದು ಎಂದರು.
ಪುರಸಭೆ ಸದಸ್ಯ ಬಿ. ಗಿರೀಶ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಡವರಿಗಾಗಿಗೆ ಇಂದಿರಾ ಕ್ಯಾಂಟೀನ್ ರಾಜ್ಯದೆಲ್ಲೆಡೆ ಆರಂಭಿಸಿದ್ದರು. ಆದರೆ ಸರ್ಕಾರ ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಲು ಪ್ರಯತ್ನಿಸುತ್ತಿದ್ದು, ಅದರಲ್ಲಿ ಇಂತಹ ಕ್ಯಾಂಟೀನ್ ನೌಕರರು ಈ ರೀತಿಯ ಅವ್ಯವಸ್ಥೆ ಮಾಡಿಕೊಂಡಿದ್ದಾರೆ. ಊಟ ಮಾಡಲು ಸರಿಯಾದ ಜಾಗದ ವ್ಯವಸ್ಥೆ ಇಲ್ಲ, ಕುಡಿಯುವ ನೀರು ಸರಿ ಇಲ್ಲ, ಗುಣಮಟ್ಟದ ಆಹಾರ ನೀಡದೆ ಇದ್ದಲ್ಲಿ ಮೇಲಾಧಿಕಾರಿಗಳಿಗೆ ಪತ್ರ ಬರೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭೆ ಸದಸ್ಯರಾದ ಭರತ, ಫಯಾಜ್ ಅಮದ್, ತೋಫೀಕ್, ಪ್ರಭಾಕರ ಅಶೋಕ್, ಸುಬ್ರಮಣ್ಯ, ಪುರಸಭೆ ಆರೋಗ್ಯಧಿಕಾರಿ ಲೋಹಿತ್, ಸಂಯೋಜಕ ಮಧುಸೂದನ ಇತರರು ಇದ್ದರು.