ಹಾಸನ: ಯಾರು ಕೂಡ ಮತದಾನದಿಂದ ಹೊರ ಗುಳಿಯದೇ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಶೇಕಡ ನೂರಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ರಾಜ್ಯದಲ್ಲಿಯೇ ಹಾಸನ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರಲು ಕೈ ಜೋಡಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮ ಕರೆ ನೀಡಿದರು.
ನಗರದ ಸಂತೇಪೇಟೆ ವೃತ್ತದಲ್ಲಿ ಮತಗಟ್ಟೆ ಭೇಟಿ ಕಾರ್ಯಕ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ನಡೆ ಮತಗಟ್ಟೆಗಳ ಕಡೆ ಕಾರ್ಯಕ್ರಮಗಳಿಂದ ಮತದಾರರಿಗೆ ಹೆಚ್ಚಿನ ಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. 2018ರಲ್ಲಿ ನಮ್ಮ ಹಾಸನ ಜಿಲ್ಲೆ ನೂರಕ್ಕೆ ಶೇ. 78ರಷ್ಟು ಮತದಾನವಾಗಿದ್ದು, ಶೇಕಡ ನೂರರಷ್ಟು ಮತದಾನ ಮಾಡಬೇಕೆಂದು ನಾನು ಸ್ವೀಪ್ ಸಮಿತಿ ಅಧ್ಯಕ್ಷರಾಗಿ ಹಾಸನ ಜಿಲ್ಲೆಯ ಜನರಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.
ನಮ್ಮ ಹಾಸನ ನಗರದಲ್ಲಿಯೇ 99 ಮತಗಟ್ಟೆಗಳಲ್ಲಿ ಶೇ. 65ಕ್ಕಿಂತ ಕಡಿಮೆ ಮತದಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶಿಕ್ಷಣ ಪಡೆದಿರುವ ವಿದ್ಯಾವಂತರೇ ಹೆಚ್ಚು ಮತದಾನ ಮಾಡದಿರುವುದು ಆತಂಕದ ವಿಚಾರ ಎಂದರು. ನಮ್ಮ ಹಕ್ಕನ್ನು ವಂಚಿತ ಮಾಡದೇ ಚಲಾಯಿಸಬೇಕು ಎಂದು ಕಿವಿಮಾತು ಹೇಳಿದರು. ಉತ್ತಮ ನಾಯಕನನ್ನು ಕೊಡುವ ಮೂಲಕ ಒಂದು ಸದೃಢವಾದ ಪ್ರಜಾ ಪ್ರಭುತ್ವವನ್ನು ನಿರ್ಮಿಸಲು ಎಲ್ಲಾರು ಕೈ ಜೋಡಿಸುವ ಮೂಲಕ ಹಾಸನದಲ್ಲಿ ಶೇ. 100ರಷ್ಟು ಮತದಾನ ಮಾಡುವ ಮೂಲಕ ರಾಜ್ಯದಲ್ಲಿ ನಮ್ಮ ಹಾಸನ ಜಿಲ್ಲೆಯನ್ನು ಪ್ರಥಮ ಸ್ಥಾನ ತರಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಹಾಗೂ ಕಲಾವಿದರು ತಮ್ಮ ಪ್ರತಿಭೆ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿಕೊಟ್ಟರು. ಚರ್ಮದ ಬೊಂಬೆ ಪ್ರದರ್ಶನದ ಮೂಲಕವು ಜಾಗೃತಿ ಮೂಡಿಸಿ ಗಮನ ಸೆಳೆದರು. ಮತದಾನದ ಬಗ್ಗೆ ಪ್ರತಿಜ್ಞೆ ಬೋಧಿಸಿದರು.
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಅಪರ ಜಿಲ್ಲಾಧಿಕಾರಿ ಆನಂದ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ.ಎ. ಪರಪ್ಪಸ್ವಾಮಿ, ಯುವಜನ ಮತ್ತು ಕ್ರೀಡಾಧಿಕಾರಿ ಹರೀಶ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಕಲಾವಿದ ಮತ್ತು ಪ್ರಶಸ್ತಿ ವಿಜೇತ ಬಿ.ಟಿ ಮಾನವ ಇತರರು ಪಾಲ್ಗೊಂಡಿದ್ದರು.