ಹಾಸನ: ನಾಳೆ (ಮೇ 10)ರಂದು ನಡೆಯಲಿರುವ ಸಾರ್ವತ್ರಿಕ ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಕೈಗೊಂಡಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2000 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಮತದಾನ ಪ್ರಕ್ರಿಯೆಗೆ ಜಿಲ್ಲೆಯಿಂದ ಸುಮಾರು 10,000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾ ಕೇಂದ್ರ ಸೇರಿದಂತೆ ಆಯಾ ತಾಲೂಕುಗಳಿಂದ ವಿವಿಧ ಮತಗಟ್ಟೆ ಕೇಂದ್ರಗಳಿಗೆ ತೆರಳಲು ಸಿಬ್ಬಂದಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೂ ಮಾಸ್ಟರಿಂಗ್ ಕೇಂದ್ರದಿಂದ (ಇವಿ) ಎಲೆಕ್ಟ್ರಾನಿಕ್ ಮತಯಂತ್ರವನ್ನು ಭದ್ರತೆ ಸಿಬ್ಬಂದಿಗಳು ಪರಿಶೀಲಿಸಿ ಮತಗಟ್ಟೆ ಕೇಂದ್ರಗಳಿಗೆ ತೆರಳುವ ಸಿಬ್ಬಂದಿಗಳಿಗೆ ಹಸ್ತಾಂತರಿಸಿದರು.
ವಿವಿಧ ಮತಗಟ್ಟೆಗಳಿಗೆ ಕರ್ತವ್ಯಕ್ಕೆ ನಿಯೋಜನೆ ಆಗಿರುವ ಸಿಬ್ಬಂದಿಗಳಿಗೆ ಕಾಲೇಜು ಆವರಣದಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಭದ್ರತಾ ಕೊಠಡಿ ಸೇರಿದಂತೆ ಕಾಲೇಜು ಆವರಣದಲ್ಲಿ ಮಿಲಿಟರಿ ಹಾಗೂ ಅರಸೇನಾ ಪಡೆ ಸಿಬ್ಬಂದಿಗಳು ಬಂದೂಬಸ್ತ್ ವ್ಯವಸ್ಥೆ ಕೈಗೊಂಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ 299 ಬಸ್, 303 ಜೀಪ್ ಗಳು, 90 ಮ್ಯಾಕ್ಸ್ ಸಿ ಕ್ಯಾಬ್ ಗಳನ್ನು ಬಳಸಿ ಮತಗಟ್ಟೆ ಸಿಬ್ಬಂದಿಗಳನ್ನು ಆಯಾ ಮತಗಟ್ಟೆಗಳಿಗೆ ತಲುಪಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗಳಿಗೆ 209 ಕಾರು-ಜೀಪುಗಳನ್ನು ಹಾಗೂ 43 ಮ್ಯಾಕ್ಸ್ ಕ್ಯಾಬ್ ಗಳನ್ನು ಒದಗಿಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದಲೇ ಹಾಸನದ ಕಲಾ ಕಾಲೇಜು ಕಟ್ಟಡ ಹಾಗೂ ಆವರಣದಲ್ಲಿ ಸಿಬ್ಬಂದಿಗಳಿಗೆ ಮಾರ್ಗದರ್ಶನ ಹಾಗೂ ಇವಿ ಯಂತ್ರಗಳನ್ನು ನೀಡುವ ಕುರಿತು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚುನಾವಣಾ ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
ಜಿಲ್ಲೆಯಲ್ಲಿ ಸುಮಾರು 15 ಲಕ್ಷ ಮತದಾರರಿದ್ದು, ನಾಳೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 2023 ಏಪ್ರಿಲ್ 20ರವರೆಗೆ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 7,49,720 ಪುರುಷ ಮತದಾರರು ಹಾಗೂ 7,50,153 ಮಹಿಳಾ ಮತದಾರರಿದ್ದು, ಇತರರು 44 ಮಂದಿ ಸೇರಿದಂತೆ ಒಟ್ಟು 14,99,917 ಮಂದಿ ಮತದಾರರಿದ್ದಾರೆ. ಈ ಬಾರಿ 27,135 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ.
ಭಾರತ ಚುನಾವಣಾ ಆಯೋಗದಿಂದ ಈ ಬಾರಿ ಹೋಂ ವೋಟಿಂಗ್ ಪ್ರಕ್ರಿಯೆ ಪ್ರಾರಂಭ ಮಾಡಿದ್ದು, 1062 ಅಂಗವಿಕಲ ಮತದಾರರ ಪೈಕಿ 1031 ಮಂದಿ ಮತ ಚಲಾವಣೆ ಮಾಡಿದ್ದು, 80 ವರ್ಷಕ್ಕಿಂತ ಮೇಲ್ಪಟ್ಟ 3056 ಮತದಾರರ ಪೈಕಿ 2874 ಮಂದಿ ಮತ ಚಲಾವಣೆ ಮಾಡಿದ್ದಾರೆ.
ಮತದಾರರು ತಮ್ಮ ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಭಾರತ ಚುನಾವಣಾ ಆಯೋಗವು ನೀಡಿರುವ ಭಾವಚಿತ್ರವುಳ್ಳ ಮತದಾರರ ಚೀಟಿ ಮತದಾನ ಅಧಿಕಾರಿಗಳಿಗೆ ತೋರಿಸುವುದು ಕಡ್ಡಾಯವಾಗಿದೆ. ಒಂದು ಪಕ್ಷ ಯಾವುದೇ ಕಾರಣದಿಂದ ಗುರುತಿನ ಚೀಟಿ ಲಭ್ಯವಿಲ್ಲದಿದ್ದಲ್ಲಿ ಪರ್ಯಾಯವಾಗಿ ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆದಾಯ ತೆರಿಗೆ ಗುರುತಿನ ಚೀಟಿ, (ಪಾನ್ ಕಾರ್ಡ್), ಆಧಾರ್ ಕಾರ್ಡ್, ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರದ ಪಾಸ್ ಪುಸ್ತಕವನ್ನು ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ಒದಗಿಸಬಹುದಾಗಿದೆ.