ಹಾಸನ: 2 ಲಕ್ಷಕ್ಕೂ ಹೆಚ್ಚು ಹಣವನ್ನು ಭರಿಸಿ ಬೇಡಿಗನಹಳ್ಳಿ ಕೆರೆಯಲ್ಲಿ ಮೀನು ಹಿಡಿಯುವ ಟೆಂಡರ್ ಪಡೆದಿದ್ದರೂ ಕೂಡ ಸ್ಥಳೀಯರು ದೌರ್ಜನ್ಯವೆಸಗುತ್ತಿದ್ದಾರೆ ಎಂದು ಮಂಚನಹಳ್ಳಿಯ ಪ್ರದೀಪ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ನಾನು ಹಾಗೂ ಕೆಲ ಸ್ನೇಹಿತರು ಸೇರಿ ಬೇಡಿಗನಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ಮೂರು ತಿಂಗಳ ಹಿಂದೆ ಟೆಂಡರ್ ಪಡೆಯಲಾಗಿದೆ, ಆದರೆ ಇಲ್ಲಿನ ಗ್ರಾಮಸ್ಥರು ಮೀನು ಹಿಡಿಯದಂತೆ ದೌರ್ಜನ್ಯವೆಸಗುತ್ತಿದ್ದಾರೆ. ಕೆರೆಯಲ್ಲಿ ಮೀನು ಹಿಡಿಯುವ ಸಂದರ್ಭದಲ್ಲಿ ಕಲ್ಲು ತೂರಾಟದಂತಹ ಘಟನೆಗಳು ನಡೆದಿದೆ. ನಮ್ಮ ಸ್ನೇಹಿತರ ಮೇಲೆಯೂ ಮಾರಣಾಂತಿಕ ಹಲ್ಲೆಗಳು ನಡೆದಿದ್ದು ನನ್ನ ತಾಯಿಯ ಮೇಲೆಯೂ ಕಲ್ಲು ತೂರಾಟ ಮಾಡಿದ್ದಾರೆ ಎಂದು ದೂರಿದರು.
ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೂ ದೂರನ್ನು ನೀಡಲಾಗಿದೆ, ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಆಗುತ್ತಿರುವ ದೌರ್ಜನ್ಯ ವಿರುದ್ಧ ಇತ್ತೀಚಿಗೆ 70ಕ್ಕೂ ಹೆಚ್ಚು ಮಂದಿ ಪೊಲೀಸರೊಂದಿಗೆ ಗ್ರಾಮದಲ್ಲಿ ಮೀನು ಹಿಡಿಯಲು ಹೋದಂತ ಸಂದರ್ಭದಲ್ಲಿ ಪೊಲೀಸರ ಎದುರೇ ಬೇಡಿಗನಹಳ್ಳಿಯ ಅಣ್ಣೆಗೌಡ, ತೋಪೇಗೌಡ, ಹರೀಶ, ಸುರೇಶ, ಶಿವು ಎಂಬುವರು ಮೀನನ್ನು ಹೊತ್ತೊಯ್ಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ವೇಳೆ ಎಸ್‌ಪಿ ತಮ್ಮಯ್ಯ ಅವರು ಸ್ಥಳದಲ್ಲೇ ಇದ್ದರು ಎಂದು ಆರೋಪಿಸಿದರು. ಬೇಡಿಗನಹಳ್ಳಿ ಗ್ರಾಮಸ್ಥರು ಈ ರೀತಿ ವರ್ತಿಸಲು ಹಾಲಿ ಶಾಸಕ ಸಿ.ಎನ್. ಬಾಲಕೃಷ್ಣ ಕಾರಣ ಅವರ ಬೆಂಬಲದಿಂದಲೇ ಈ ರೀತಿ ವರ್ತಿಸುತ್ತಿದ್ದಾರೆ ಆದ್ದರಿಂದ ನಮಗೆ ನ್ಯಾಯ ಒದಗಿಸಬೇಕು. ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮೀನು ಹಿಡಿಯಲು ಅವಕಾಶ ಒದಗಿಸಬೇಕು ಎಂದು ಪ್ರದೀಪ ಮನವಿ ಮಾಡಿದರು.
ಫೆಬ್ರವರಿ 27ರಂದು ನನ್ನ ಸ್ನೇಹಿತನಾದ ಸಹದೇವ ಅವರ ಮೇಲೆ ಬೇಡಿಗನಹಳ್ಳಿ ಗ್ರಾಮದ ಕೆಲವರು ಮರಣಾಂತಿಕ ಹಲ್ಲೆ ನಡೆಸಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದರೆ ನಮ್ಮ ಹಾಗೂ ಸ್ನೇಹಿತರ ಮೇಲಿನ ಮುಂದೆ ನಡೆಯುವ ಹಲ್ಲೆಗೆ ಪೊಲೀಸ್ ಇಲಾಖೆ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗಿರೀಶ, ಹರೀಶ ಸುನಂದಾ ಇದ್ದರು.