ಹಾಸನ: ಮಹತ್ವದ 2023 ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಕಾರ್ಯ ಮುಕ್ತಾಯ ಗೊಂಡಿದ್ದು, ಇದೀಗ ರಾಜಕೀಯ ಪಕ್ಷಗಳಲ್ಲಿ ಹಾಗೂ ಜನರಲ್ಲಿ ಯಾರು ಗೆಲುವು ಪಡೆಯಲಿದ್ದಾರೆ ಎಂಬ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.
ಹಾಸನ ಜಿಲ್ಲೆಯ ಮಟ್ಟಿಗೆ ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಪ್ರತಿ ಕ್ಷೇತ್ರದಲ್ಲಿ ಯಾರ ಗೆಲುವಾಗಲಿದೆ.! ಯಾರೂ ಸೋಲನ್ನು ಅನುಭವಿಸಲಿದ್ದಾರೆ ಎಂಬ ಲೆಕ್ಕಾಚಾರ ಕಗ್ಗಂಟಾಗಿ ಮುಂದುವರೆದಿರುವ ನಡುವೆ ಚುನಾವಣೆ ಮುಗಿದ ಬಳಿಕ ಕೆಲ ಸಮೀಕ್ಷೆ ಹೊರಬಂದಿದ್ದರೂ ಮತಪೆಟ್ಟಿಗೆಯಲ್ಲಿ ಮತದಾರ ಯಾರಿಗೆ ಕೃಪೆ ತೋರಿದ್ದಾರೆ ಎಂಬ ಗೊಂದಲವಿದೆ. ಈಗಾಗಲೇ ಮತಯಂತ್ರದಲ್ಲಿ ಎಲ್ಲರ ಭವಿಷ್ಯ ಭದ್ರವಾಗಿದ್ದು ಜನರಿಗೆ, ಅಭ್ಯರ್ಥಿ, ಕಾರ್ಯಕರ್ತರು, ಮುಖಂಡರಿಗೂ ಯಾರು ಗೆಲುವು ಪಡೆಯುವರು ಎಂಬ ಲೆಕ್ಕಾಚಾರ ಕಾಡಿದೆ.
ನಗರದ ಯಾವುದೇ ಹೋಟೆಲ್, ಅಂಗಡಿ, ಟೀ ಸ್ಟಾಲ್, ಕಚೇರಿ, ಗ್ರಾಮಗಳಿಗೆ ಹೋದರೂ ಚುನಾವಣೆ ಫಲಿತಾಂಶದ ಬಗೆಗಿನ ಮಾತುಗಳು ಹರಿದಾಡುತ್ತಿದೆ. ಬೇಲೂರು ಹಾಗೂ ಸಕಲೇಶಪುರ ಆಲೂರು, ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಅಂತೆಯೇ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯ ನಡುವೆ ನೇರ ಸ್ಪರ್ಧೆ ನಡೆದಿದೆ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಡೆದಿದೆ. ಅರಕಲಗೂಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಎ ಮಂಜು ಅವರಿಗೆ ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡ ಅವರು ತೀವ್ರ ಪೈಪೋಟಿ ಒಡ್ಡಿದ್ದಾರೆ ಎಂಬ ಲೆಕ್ಕಾಚಾರ ವ್ಯಾಪಕವಾಗಿದೆ.
ಬೆಟ್ಟಿಂಗ್‌ಗೂ ಹಿಂದೇಟು!!?
ಯಾವುದೇ ಚುನಾವಣೆ ನಡೆದರೂ ಇಂತಹ ಅಭ್ಯರ್ಥಿ ಗೆಲುವು ಪಡೆಯಲಿದ್ದಾರೆ, ಇಂತಹವರು ಸೋಲು ಪಡೆಯುವರು ಎಂಬ ಲೆಕ್ಕಾಚಾರ ನಡೆಯುತ್ತಿತ್ತು ಹಾಗೂ ಕೋಟ್ಯಾಂತರ ರೂ. ಬೆಟ್ಟಿಂಗ್ ನಡೆಯುತ್ತಿತ್ತು. ಆದರೆ ಈ ಬಾರಿ ಲೆಕ್ಕಾಚಾರಕ್ಕೆ ಸಿಗದಂತೆ ಪ್ರತಿ ಕ್ಷೇತ್ರದ ಚುನಾವಣೆ ಫಲಿತಾಂಶ ನಿಗೂಢವಾಗಿದೆ. ಯಾವ ಅಭ್ಯರ್ಥಿ ಗೆಲುವು ಪಡೆಯಲಿದ್ದಾರೆ ಎಂಬ ಅಂದಾಜನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಚುನಾವಣೆಗೂ ಭಿನ್ನ ಈ ಬಾರಿಯ ವಿಧಾನಸಭೆ ಚುನಾವಣೆ, ಈ ಹಿಂದೆ ನಡೆದ ಹಲವು ವಿಧಾನಸಭೆ ಚುನಾವಣೆಗೆ ಭಿನ್ನವಾಗಿದೆ ಎಂದು ಹೇಳಬಹುದು. ಕಾರಣ ಹಣಬಲ-ಜಾತಿಬಲ ಸೇರಿದಂತೆ ಎಲ್ಲಾ ಲೆಕ್ಕಾಚಾರಕ್ಕೂ ವಿರುದ್ದವಾಗಿ ಜನಾದೇಶ ಮಾಡಿರುವ ಮತದಾರ ಮತಪೆಟ್ಟಿಗೆ ತೆಗೆದು ಎಣಿಕೆ ಮಾಡುವವರಗೆ ನಿರ್ಧಿಷ್ಟವಾಗಿ ಫಲಿತಾಂಶ ಹೇಳಲು ಸಾಧ್ಯವಾಗುತ್ತಿಲ್ಲ.
ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಹಣದ ಹೊಳೆಯೇ ಈ ಚುನಾವಣೆಯಲ್ಲಿ ಹರಿಯಲಿದೆ ಎಂಬ ಮಾತು ಹುಸಿಯಾಗಿದೆ ಎನ್ನಲಾಗುತ್ತಿದೆ. ಕೆಲ ಪಕ್ಷದಿಂದ ಮತದಾರರಿಗೆ ಸಾವಿರಾರು ರೂ. ಹಣದ ಅಮೀಷ ಒಡ್ಡುವ ಕುರಿತು ಮಾತುಗಳು ಕೇಳಿಬಂದರೂ ಸಾವಿರದ ಒಳಗೆ ಎಲ್ಲಾ ಪಕ್ಷದವರು ಸಮಾನವಾಗಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾಣದಂತಾಗಿದ್ದು, ಅಂತಿಮ ಹಂತದಲ್ಲಿ ಟಿಕೆಟ್ ಪಡೆದ ಬನವಾಸೆ ರಂಗಸ್ವಾಮಿ ತಮ್ಮ ಕೈಲಾದ ಪ್ರಚಾರವನ್ನು ಕೈಗೊಂಡರೂ ಸಹ ಪಕ್ಷದ ಇತರೆ ಮುಖಂಡರ ಪೂರ್ಣ ಬೆಂಬಲ ಇಲ್ಲದೇ ಕ್ಷೇತ್ರದಲ್ಲಿ ಓಡಾಡಲು ಸಮಯ ಸಿಗದೇ ಕೊನೆಯ ಹಂತದ ಚುನಾವಣಾ ತಯಾರಿ ಸಮರ್ಪಕವಾಗಿ ಮಾಡದ ಹಿನ್ನೆಲೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾವುದೇ ಪರಿಣಾಮ ಬೀರುವಲ್ಲಿ ವಿಫಲವಾಗಿದೆ ಎನ್ನಬಹುದು.