ಬಾಣಾವರ: ಇಲ್ಲಿನ ಐತಿಹಾಸಿಕ ಇತಿಹಾಸ ಪ್ರಸಿದ್ಧ ಪ್ರಾಚೀನ ಸ್ಮಾರಕವಾದ ಕೋಟೆಗೆ ಸಮಾಜ ಸೇವಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಜೆ ಪಿ ಜಯಣ್ಣನವರು ಭೇಟಿ ನೀಡಿ, ಕೋಟೆ ಆವರಣವನ್ನು ಜೀರ್ಣೋದ್ಧಾರಗೊಳಿಸುತ್ತಿರುವ ಪ್ರಾಚೀನ ಸ್ಮಾರಕಗಳ ಸಂರಕ್ಷಣ ಟ್ರಸ್ಟ್ ಕಾರ್ಯಕರ್ತರಿಗೆ ಅಭಿನಂದಿಸಲಾಯಿತು.
ನಂತರ ಮಾತನಾಡುತ್ತಾ ಬಾಣಾವರ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಂದು ಅಭೂತಪೂರ್ವವಾದ ಗ್ರಾಮವಾಗಿದ್ದು, ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಸ್ಥಾನಮಾನವನ್ನು ಪಡೆದುಕೊಂಡಿದೆ. ಅಲ್ಲದೆ ನಗರದ ಹೃದಯ ಭಾಗದಲ್ಲಿ ಸುಮಾರು ಮೂರು ಎಕರೆಗೂ ಹೆಚ್ಚಿನದಾಗಿರುವ ವಿಸ್ತೀರ್ಣವನ್ನು ಹೊಂದಿರುವ ಬಾಣಾವರದ ಕೋಟೆ ಹಲವು ರಾಜ ಮನೆತನಗಳ ಆಳ್ವಿಕೆಯ ಕುರುಹು ಆಗಿದ್ದು, ಈ ಒಂದು ಕೋಟೆ ಆವರಣ ಒಳಾಂಗಣ ಮತ್ತು ಹೊರಾಂಗಣ ಕಲುಷಿತಗೊಂಡಿದ್ದು, ಸರ್ಕಾರ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷಕ್ಕೆ ಒಳಗಾಗಿತ್ತು ಎಂದರು.
ಇಂತಹ ಸಂದರ್ಭದಲ್ಲಿ ಪ್ರಾಚೀನ ಸ್ಮಾರಕ ಸಂರಕ್ಷಣಾ ಟ್ರಸ್ಟ್ ಕಾರ್ಯಕರ್ತರು ಈ ಒಂದು ಕೋಟೆ ಆವರಣವನ್ನು ಸ್ವಚ್ಛಗೊಳಿಸುತ್ತಿದ್ದು, ಈ ಕೋಟೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಕೊಡಲು ಹೊರಟಿರುವುದು ನಿಜಕ್ಕೂ ಸಹ ಸಂತಸದ ಸುದ್ದಿಯಾಗಿದ್ದು ಈ ಕೋಟೆ ಆವರಣ ಜೀರ್ಣೋದ್ಧಾರವಾದರೆ ಕೋಟೆಯ ಒಳಾಂಗಣದಲ್ಲಿ ವಾಯು ವಿಹಾರಕ್ಕೆ ತುಂಬಾ ಅನುಕೂಲವಾಗುತ್ತದೆ ಮತ್ತು ಕರ್ನಾಟಕದ ಇತಿಹಾಸವನ್ನು ಸಾರುವಂತ ಇಂತಹ ಸ್ಮಾರಕಗಳು ಅವನತಿಯಾದರೆ ನಮ್ಮ ಇತಿಹಾಸವೇ ಅವನತಿಯಾದಂತೆ ಎಂದರು.
ಆದ್ದರಿಂದ ಸಂಬಂಧಪಟ್ಟ ಆಡಳಿತ ಮಂಡಳಿ ಹಾಗೂ ಸ್ಥಳೀಯ ಆಡಳಿತ ಮತ್ತು ಸರ್ಕಾರ ಜನಪ್ರತಿನಿಧಿಗಳು ಈ ಕೋಟೆಯನ್ನು ಅಭಿವೃದ್ಧಿಪಡಿಸುವ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಲದೀಪ್ ಜಯಣ್ಣನವರು ಹಾಗೂ ಪ್ರಾಚೀನ ಸ್ಮಾರಕ ಸಂರಕ್ಷಣಾ ಟ್ರಸ್ಟ್ ಗೌರವಾಧ್ಯಕ್ಷ ಬಿ. ರವಿಶಂಕರ್, ಅಧ್ಯಕ್ಷ ಬಿ. ಎಲ್. ಗೋಪಾಲ ಆಚಾರ್ಯ, ಕಾರ್ಯದರ್ಶಿ ಸಾಧಿಕ್, ಉಪಾಧ್ಯಕ್ಷ ಕಲ್ಲೇಶ್, ಖಜಾಂಚಿ ಬಿಟಿ ರಾಜು, ಸಹಕಾರ್ಯದರ್ಶಿ ಮಾರುತಿ, ಸದಸ್ಯರುಗಳಾದ ಬೀರಪ್ಪ, ಮಂಜುನಾಥ, ವರುಣ ಸೇರಿದಂತೆ ಇತರರು ಉಪಸ್ಥಿತರಿದ್ದರು.