ಹಾಸನ: ನಗರದ ಆರ್.ಸಿ. ರಸ್ತೆ, ವೆಸ್ಲಿ ಚರ್ಚ್ ಬಳಿ ಇರುವ ನೂತನ ವೃತ್ತಕ್ಕೆ ದೇವರ ದಾಸಿಮಯ್ಯ ಎಂದು ನಾಮಕರಣ ಮಾಡಲಾಗಿದ್ದು, ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಉದ್ಘಾಟಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ನಂತರ ಉದ್ದೇಶಿಸಿ ಮಾತನಾಡಿದ ಅವರು, ಇಡೀ ಕರ್ನಾಟಕದಲ್ಲಿ ಇಲ್ಲಿವರೆಗೂ ಯಾವುದೇ ವೃತ್ತಕ್ಕೆ ದೇವರ ದಾಸಿಮಯ್ಯವರ ಹೆಸರನ್ನು ಇಟ್ಟು ಪ್ರತಿಷ್ಠಾನ ಮಾಡಿರುವ ಉದಾಹರಣೆ ಕೇಳಿರುವುದಿಲ್ಲ. ಮೊದಲಿಗರಾಗಿ ಸಮಾಜದ ಬಂದುಗಳ ಸಹಕಾರದಲ್ಲಿ ಹಾಸನದ ಮುಖ್ಯ ವೃತ್ತವಾಗಿ ಈ ವೃತ್ತ ಆಗಲಿದೆ. ಮನುಷ್ಯನಾದ ನಾವುಗಳು ಇಂತಹ ಜಾತಿಯಲ್ಲೆ ಹುಟ್ಟಬೇಕೆಂದು ಯಾರು ಅರ್ಜಿ ಹಾಕಿರುವುದಿಲ್ಲ. ದೈವಾನುಗ್ರಹ ಸಮಾಜದಲ್ಲಿ ನಾವು ಜನಿಸಿದ್ದೇವೆ. ಒಂದು ಸಮಾಜದ ಕಷ್ಟ-ಸುಃಖಗಳಿಗೆ ನೆರವಾದಾಗ ಆತನು ಕೂಡ ಸಮಾಜಕ್ಕೆ ಸೇರುತ್ತಾನೆ. ಅದಕ್ಕೆ ಉದಾಹರಣೆಯಾಗಿ ನಿಮ್ಮ ಪ್ರೀತಂ ಗೌಡ. ಒಕ್ಕಲಿಗನಾದ್ರು ಕೂಡ ಎಲ್ಲಾ ಹಿಂದೂಳಿದ ಸಮಾಜದ ಬಂದುಗಳು, ಅವರ ಸಮಾಜದ ವ್ಯಕ್ತಿಯ ರೀತಿಯಲ್ಲಿ ಪ್ರೀತಿಯಿಂದ ಕಾಣುತ್ತಾರೆ ಎಂದರು.
ನಾನು ಶಾಸಕನಾದ ವೇಳೆ ಒಂದು ಸಮಾಜಕ್ಕೆ ಇಲ್ಲವೇ ಒಬ್ಬರಿಗೆ ಸೀಮಿತವಾಗಿ ಕೆಲಸ ಮಾಡದೇ ಹಿಂದುಳಿದ ವರ್ಗಗಳ ಒಕ್ಕೂಟ ಕೇಳಿದ ಕೆಲಸದಿಂದ ಹಿಡಿದು ಪ್ರತಿಯೊಂದು ಹಿಂದುಳಿದ ಸಮಾಜಕ್ಕೆ ನಿವೇಶನ ಕೊಡುವುದರಿಂದ ಹಿಡಿದು ಉತ್ತಮವಾದ ಸೌಕರ್ಯ ಸಿಗುವ ನಿಟ್ಟಿನಲ್ಲಿ ನಾವೆಲ್ಲಾರೂ ಕೆಲಸ ಮಾಡಲಾಗುತ್ತಿದೆ. ಹಿಂದೂಳಿದ ಒಕ್ಕೂಟಗಳೆಲ್ಲಾ ಸೇರಿ ೨೦ ಸಾವಿರ ಅಡಿ ಜಾಗಬೇಕೆಂದು ಕೇಳಿದಾಗ ಅರಸೀಕೆರೆ ಮುಖ್ಯ ರಸ್ತೆಗೆ ನಿವೇಶನವನ್ನು ಕೊಡುವುದರ ಮೂಲಕ ಅಲ್ಲಿ ಉತ್ತಮ ದರ್ಜೆಯ ಸಮುದಾಯಭವನವನ್ನು ನಿರ್ಮಿಸಿ ಸಮಾಜದ ಮನೆ ಮಕ್ಕಳಿಗೆ ಅವಶ್ಯಕವಾಗಿ ಬೇಕಾಗಿರುವ ಶುಭ ಕಾರ್‍ಯಗಳಿಗೆ ಕೇವಲ ಕ್ಲೀನಿಂಗ್ ಹಣ ನೀಡಿ ನಡೆಸಲು ಕಲ್ಪಿಸಲಾಗಿದೆ ಎಂದು ಕಿವಿಮಾತು ಹೇಳಿದರು.
ಕುರಹಿನ ಶೆಟ್ಟಿ, ದೇವಾಂಗ, ಈಡಿಗ, ಕುಂಬಾರ ಸಮುದಾಯ ಸೇರಿದಂತೆ ಎಲ್ಲಾ ಸಮಾಜಕ್ಕೂ ೯ ಸಾವಿರ ಅಡಿ ಜಾಗ ಕೇಳಿದಾಗ ಅರಸೀಕೆರೆ ರಸ್ತೆ, ಕೃಷ್ಣ ನಗರದಲ್ಲಿ ನಿವೇಶನ ಕೊಡುವುದರ ಮೂಲಕ ಸಮಾಜದ ಹೇಳಿಗೆಗೆ ಶ್ರಮಿಸುವ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದರು.
ದೇವಾಂಗ ಸಂಘದ ಅಧ್ಯಕ್ಷರಾದ ನಂಜುಂಡಸ್ವಾಮಿ ಮತ್ತು ನೇಕಾರ ದೇವರ ದಾಸಿಮಯ್ಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎನ್. ಮನೋಹರ ಮಾತನಾಡಿ, ಹಾಸನ ಕ್ಷೇತ್ರದ ಶಾಸಕರು ಎಂದರೇ ನಮ್ಮ ಹಿಂದೂಳಿದ ವರ್ಗಗಳ ನೇತಾರರು ಎಂದು ಹೇಳಬಹುದು. ಸಣ್ಣಪುಟ್ಟ ಜನಾಂಗ ಏನಿದೆ ಅವರಿಗೆಲ್ಲಾ ಸಕಲ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ. ಶಾಸಕರ ಆದೇಶ ಪಡೆದು ಕೇವಲ ಎರಡು ದಿನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ನೇಕಾರರ ಜನಾಂಗ ಏನಿದ್ದೀವಿ ಅವರೆಲ್ಲರೂ ಕೃತಜ್ಞರಾಗಿರಬೇಕೆಂದು ಮನವಿ ಮಾಡಿದರು. ಈ ವೃತ್ತದಲ್ಲಿ ದೇವರ ದಾಸಿಯಮ್ಮ ಅವರ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಶಾಸಕರಿಗೆ ಮನವಿ ಮಾಡಿದ್ದೇವೆ. ಜತೆಗೆ ವೃತ್ತದ ನಾಮಫಲಕವನ್ನು ಸಲ್ಪ ದೊಡ್ಡದಾಗಿ ಹಾಕಿಕೊಡಬೇಕೆಂದರು.
ನಮ್ಮ ಜನಾಂಗದಲ್ಲಿ ಯಾವ ರಾಜಕಾರಣಿ ಇರುವುದಿಲ್ಲ. ಎಲ್ಲಾ ನೀವೆ ಆಗಿದ್ದೀರಿ. ನಮ್ಮ ಕಷ್ಟ ಸುಖಕ್ಕೆ ನಿಮ್ಮನ್ನೆ ಕೇಳಬೇಕು ಎಂದು ಬಣ್ಣಿಸಿದರು. ಹಾಸನ ನಗರದಲ್ಲಿ ೯ ಪಾರ್ಕ್ ಮತ್ತು ೨೦ ಕೆರೆಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಮಹಾರಾಜ ಪಾರ್ಕ್‌ನಲ್ಲಿ ಮ್ಯೂಸಿಕ್ ಲೈಟಿಂಗ್ ಅಳವಡಿಸಿ ಆಕರ್ಷಣೆಯಾಗಿ ಮಾಡಿಸಿದ್ದಾರೆ. ಸರಳ ಸಜ್ಜಿನಿಕೆಯ ಶಾಸಕರನ್ನು ಹೊಂದಿದ್ದೇವೆ. ಮುಂದೆ ಅವರೆ ಶಾಸಕರಾಗಿ ಮುಂದುವರೆದು ಇನ್ನು ಹೆಚ್ಚು ಅಭಿವೃದ್ಧಿ ಕೆಲಸ ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ನೂತನ ವೃತ್ತ ಉದ್ಘಾಟನೆಗೂ ಮೊದಲು ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಸಮುದಾಯದವರು ಬಂದು ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪುನೀತ್, ಮೋಹನ್, ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಶೆಟ್ರು, ಬನಶಂಕರಿ ದೇವಾಂಗ ಸಂಘದ ಅಧ್ಯಕ್ಷ ಆನಂದ, ದೇವಾಂಗ ಮಂಡಳಿ ಸಂಘದ ಅಧ್ಯಕ್ಷ ಜ್ಞಾನೇಶ್ವರ, ಪಟ್ಟಸಾಲಿ ಸಂಘದ ಅಧ್ಯಕ್ಷ ಲಕ್ಷ್ಮಣ, ನಾಗವೇಣಿ, ಪ್ರೇಮಮ್ಮ ಇತರರು ಉಪಸ್ಥಿತರಿದ್ದರು. ರುಕ್ಮಿಣಿ ಮತ್ತು ಪಾರ್ವತಿ ಪ್ರಾರ್ಥಿಸಿದರು.