ಕೊಣನೂರು: ಇಲ್ಲಿನ ಉರ್ದು ಶಾಲೆಯಲ್ಲಿ ರಚಿಸಿದ್ದ ವಿಷಯಾಧಾರಿತ ಹಾಗೂ ಮಾದರಿ ಮತಗಟ್ಟೆ ಎಲ್ಲರ ಗಮನಸೆಳೆದವು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಗಿರಿಧರ್ ಮಾತನಾಡಿ, ಅರಕಲಗೂಡು ವಿಧಾನಸಭಾ ಕ್ಷೇತ್ರದ 287 ಮತಗಟ್ಟೆಗಳಲ್ಲಿ 9 ಮತಗಟ್ಟೆಗಳನ್ನು ವಿಶೇಷವಾಗಿ ರಚಿಸಿದ್ದೇವೆ. ಅದೇ ರೀತಿ ಇಲ್ಲಿನ ಉರ್ದು ಶಾಲೆಯಲ್ಲಿ ವಿಷಯಾಧಾರಿತವಾಗಿ ಅಂದರೆ ಹಾಸನ ಜಿಲ್ಲೆಯ ವಿಶೇಷತೆಗಳಾದ ಕೊಣನೂರಿನ ತೂಗುಸೇತುವೆ, ರುದ್ರಪಟ್ಟಣದ ಸಪ್ತಸ್ವರ ದೇವತಾ ಮಂದಿರ, ಗೊರೂರು ಡ್ಯಾಂ, ಇಸ್ರೋ ಕೇಂದ್ರದ ಚಿತ್ರಗಳನ್ನು ಬಿಡಿಸಿ ಅಂದವಾಗಿ ಮಾಡಿದ್ದೇವೆ.
ಇದೇ ರೀತಿ ರುದ್ರಪಟ್ಟಣದಲ್ಲಿ ವಿಷಯಾಧಾರಿತ ಮತಗಟ್ಟೆ, 2 ಯುವ ಮತದಾನ ಕೇಂದ್ರ, ಕೊರಟಿಕೆರೆಯಲ್ಲಿ ದೈಹಿಕ ಅಂಗವಿಕಲರಿಗಾಗಿ ವಿಶೇಷ ಮತಗಟ್ಟೆ, ರಾಮನಾಥಪುರ ಹಾಗೂ ಕೊಣನೂರಿನಲ್ಲಿ ಮಾದರಿ ಮತಗಟ್ಟೆಗಳನ್ನು ಮಾಡಿದ್ದೇವೆ. ವಿಶೇಷವಾಗಿ ನಾವು ಇದನ್ನು ಪ್ರಜಾಪ್ರಭುತ್ವದ ಹಬ್ಬ ಎಂಬಂತೆ ಮಾಡಿ ಮತದಾನ ಮಾಡಲು ಬರುವ ಸಾಮಾನ್ಯರನ್ನು ಚುನಾವಣೆಯಲ್ಲಿ ವಿಶೇಷವಾದವರು ಎಂಬ ಭಾವನೆ ಬರುವಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಮಾಡಿದ್ದೇವೆ ಎಂದರು.
ಪಿಡಿಒ ಗಣೇಶ್, ಸಿಬ್ಬಂದಿ ತಿಮ್ಮಯ್ಯ ಹಾಗೂ ಇತರ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ಉಪಸ್ಥಿತರಿದ್ದರು.