ಸಕಲೇಶಪುರ: ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಜನರಿಗೆ ತೊಂದರೆ ನೀಡುತ್ತಿದ್ದ ಮಕ್ನಾ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಪರಿಶ್ರಮದ ಬಳಿಕ ಯಶಸ್ವಿಯಾದರು.
ಕಳೆದ ವಾರ ಕಾಡಾನೆಗಳಿಗೆ ಕಾಲರ್ ಅಳವಡಿಸಿ ಯಶಸ್ವಿಯಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ತಂಡಕ್ಕೆ ಎರಡು ಕಾಡಾನೆಗಳನ್ನು ಹಿಡಿದು ಅರಣ್ಯ ಶಿಬಿರಕ್ಕೆ ಕಳುಹಿಸಲು ಅನುಮತಿ ಪಡೆದ ಬಳಿಕ ಮಕ್ನಾ ಕಾಡಾನೆ ಹಿಡಿಯಲು ಮುಂದಾಗಿತ್ತು. ಮೊದಲೇ ಇದ್ದ ಮೂರು ಕಾಡಾನೆಗಳೊಂದಿಗೆ ದುಬಾರೆ ಶಿಬಿರದಿಂದ ಎರಡು ಕಾಡಾನೆಗಳನ್ನು ಕರೆ ತರಲಾಯಿತು. ಗುರುವಾರ ನಡೆಯಬೇಕಿದ್ದ ಕಾರ್ಯಾಚರಣೆಗೆ ದುಬಾರೆಯಿಂದ ಬರಬೇಕಿದ್ದ ಹರ್ಷ ಮತ್ತು ದನಂಜಯ ಕಾಡಾನೆಗಳು ತಡವಾಗಿ ಆಗಮಿಸಿದ ಹಿನ್ನಲೆಯಲ್ಲಿ ಇಂದು ಕಾಡಾನೆ ಕಾರ್ಯಾಚರಣೆಯನ್ನು ಆರಂಭಿಸಲಾಯಿತು.
ಡಿ.ಎಫ್.ಓ ಹರೀಶ್ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ 10:30ಕ್ಕೆ ಆರಂಭವಾದ ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಸಕಲೇಶಪುರ ತಾಲೂಕಿನ ಬಾಗೆ ಸಮೀಪದ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ಮಕ್ನಾ ಪತ್ತೆಯಾಯಿತು.
10:35ಕ್ಕೆ ಮೊದಲ ಡಾಟ್..!
ಕಾಡಾನೆ ಮಕ್ನಾ ಪತ್ತೆಯಾದ ಬಳಿಕ 10:35ಕ್ಕೆ ಕಾಡಾನೆಗೆ ಮೊದಲ ಅರವಳಿಕೆ ಚುಚ್ಚು ಮದ್ದು ನೀಡಲಾಯಿತು. ಈ ವೇಳೆ ಅಲ್ಲಿಂದ ಓಡಿದ ಕಾಡಾನೆ ಸತತ ಮೂರು ತಾಸುಗಳವರೆಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಾಡಿಸಿತು. ಬಳಿಕ ರಾಷ್ಟ್ರೀಯ ಹೆದ್ದಾರಿ 75ನ್ನು ದಾಟಿದ ಸಲಗ, ಸಮೀಪದ ಒಸ್ಸೂರು ಎಸ್ಟೇಟ್ ಬಳಿ ಕಾಣಿಸಿಕೊಂಡಿತು. ಈ ವೇಳೆ ಮತ್ತೊಮ್ಮೆ ಅರವಳಿಕೆ ಚುಚ್ಚು ಮದ್ದು ನೀಡಲಾಯಿತು. ಈ ಸಮುಯದಲ್ಲಿಯೂ ಕಾಡಾನೆ ತಪ್ಪಿಸಿಕೊಂಡು ಓಡುವ ಹಂತದಲ್ಲಿ ಸಾಕಾನೆಗಳು ಕಾಡಾನೆಯನ್ನು ಸುತ್ತುವರೆದ ವೇಳೆ ಮಗದೊಮ್ಮೆ ತಜ್ಞರು ಅರವಳಿಕೆ ನೀಡಿದ ಬಳಿಕ ನಿಂತ ಸ್ಥಳದಲ್ಲಿಯೇ ನಿಂತಿತು. ಈ ವೇಳೆ ಪುಂಡ ಕಾಡಾನೆ ಕಣ್ಣಿಗೆ ಬಟ್ಟೆ ಕಟ್ಟಿದ ಕಾರ್ಯಾಚರಣೆ ತಂಡ ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ಐದು ಸಾಕಾನೆಗಳ ಸಹಾಯದಿಂದ ಸೆಣಬಿನ ಹಗ್ಗದಿಂದ ಬಿಗಿದು ಕ್ರೈನ್ ಮೂಲಕ ಕ್ರಾಲ್‌ಗೆ ತಳ್ಳಲಾಯಿತು. ಬಳಿಕ ಸೆರೆ ಸಿಕ್ಕ ಪುಂಡಾನೆಯನ್ನು ಮತ್ತಿಗೋಡು ಆನೆ ಶಿಬಿರಕ್ಕೆ ಕಳುಹಿಸಲಾಯಿತು.
ಅರವಳಿಕೆಗೂ ಜಗ್ಗದ ಮಕ್ನಾ
ಸಾಮಾನ್ಯವಾಗಿ ಕಾಡಾನೆ ಕಾರ್ಯಾಚರಣೆ ವೇಳೆ ಒಂದು ಅರವಳಿಕೆ ಚುಚ್ಚು ಮದ್ದು ನೀಡಿದರೆ ಕಾಡಾನೆಗಳು ನೆಲಕ್ಕುರುಳುವುದು ಸಾಮಾನ್ಯ, ಆದರೆ ಮಕ್ನಾಗೆ ನಾಲ್ಕು ಬಾರಿ ಅರವಳಿಕೆ ಚುಚ್ಚುಮದ್ದು ನೀಡಿದರೂ ಸಹ ನೆಲಕ್ಕುರುಳದ ಕಾಡಾನೆ ನಿಂತ ಜಾಗದಲ್ಲಿಯೇ ನಿಂತಿದ್ದು ಮಕ್ನಾ ಕಾಡಾನೆ ಶಕ್ತಿಗೆ ಸಾಕ್ಷಿಯಾಯಿತು.
ಈ ಹಿಂದೆಯೂ ಸೆರೆ ಸಿಕ್ಕಿದ್ದ ಪುಂಡಾನೆ
ಇಂದು ಸೆರೆ ಸಿಕ್ಕ ಮಕ್ನಾ ಪುಂಡಾನೆಯನ್ನು ಈ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದು ಬಂಡಿಪುರ ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು. 2022ರ ಜೂನ್ 26ರಂದು ಮಕ್ನಾ ಕಾಡಾನೆ ಸೆರೆ ಹಿಡಿಯಲಾಗಿತ್ತು. ಅಂದು ಸಹ ಮನೆಗಳ ಮೇಲೆ ದಾಳಿ ಮಾಡುತ್ತಿದ್ದ ಕಾಡಾನೆ ಮನೆಯ ಬಾಗಿಲು ಮುರಿದು ಮನೆಯೊಳಗಿದ್ದ ಭತ್ತ ಹೊತ್ತು ತಂದು ತಿನ್ನುತ್ತಿತ್ತು. ಇದಾದ ಬಳಿಕ ಮಕ್ನಾ ಕಾಡಾನೆ ನೂರಾರು ಕಿಲೋ ಮೀಟರ್ ಕ್ರಮಿಸಿ ಪುನಃ ಸಕಲೇಶಪುರದ ತನ್ನ ವಾಸಸ್ಥಾನಕ್ಕೆ ಬಂದು ಈ ಹಿಂದೆ ದಾಳಿ ಮಾಡಿದ್ದ ಮನೆಯ ಮೇಲೆಯೇ ದಾಳಿ ಮಾಡಿ ಭತ್ತ ಕದ್ದು ತಿಂದಿತ್ತು. ಅರೇಹಳ್ಳಿ ಭಾಗದಲ್ಲಿ ಸೊಸೈಟಿಯ ಬಾಗಿಲು ಮುರಿದು ಭತ್ತ ತಿಂದಿತ್ತು. ಗುರುವಾರ ಸಹ ಮಠಸಾಗರ ಸಮೀಪ ಮನೆಯೊಂದರ ಮೇಲೆ ದಾಳಿ ಮಾಡಿ ಅಕ್ಕಿ ಮೂಟೆ ತಿಂದು ರಾಜಾರೋಷವಾಗಿ ತೆರಳಿತು. ಕಾಡಾನೆ ಸೆರೆಯಿಂದ ನೆಮ್ಮದಿಯ ಈ ಬಾಗದ ಜನರು ನಿಟ್ಟುಸಿರು ಬಿಟ್ಟರು.