ಹಾಸನ: ಪ್ರಕರಣ ದಾಖಲಾಗಿ 15 ದಿನಗಳು ಕಳೆದರೂ ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಕೂಡಲೇ ಕ್ರಮ ತೆಗೆದುಕೊಂಡು ನಮಗೆ ನ್ಯಾಯ ಕೊಡಿಸಬೇಕೆಂದು ದಲಿತ ರಕ್ಷಣಾ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬೇಲೂರು ತಾಲೂಕುನ ಮಾದೀಹಳ್ಳಿ ಹೋಬಳಿ, ಅಡಗೂರು ಗ್ರಾಮದ ಭಾಗ್ಯ ರಂಗಸ್ವಾಮಿಯವರ ಶಿವಪುರ ಕಾವಲು ಗ್ರಾಮಕ್ಕೆ ಸೇರಿದ ಸ.ನಂ. 179ರಲ್ಲಿ 4 ಎಕರೆ ಜಮೀನಿದ್ದು, ಈ ಜಮೀನು ಅನುಭವದಲ್ಲಿರುತ್ತಾರೆ. ಇದೇ ಜಮೀನಿನಲ್ಲಿ ದನ ಕರುಗಳನ್ನು ಕಟ್ಟುವುದಕ್ಕೆ ಹಾಗೂ ವಾಸಕ್ಕೆಂದು ನಿರ್ಮಿಸಿಕೊಂಡಿದ್ದ ಒಂದು ಶೀಟ್ ವುಳ್ಳ ಶೆಡ್‌ನ್ನು ಮಾಡಿಕೊಂಡಿದ್ದು, ಸುಮಾರು 10 ವರ್ಷಗಳಿಂದಲೂ ಶೆಡ್ ಅಲ್ಲಿ ಇರಲಾಗಿದೆ. ಜಮೀನಿನ ವಿಚಾರವಾಗಿ ಮಾದಿಹಳ್ಳಿ ಹೋಬಳಿ, ತಟ್ಟೆಹಳ್ಳಿ ಗ್ರಾಮದ ವಾಸಿಗಳಾದ ರುದ್ರೇಗೌಡರ ಮಕ್ಕಳಾದ ಚಂದ್ರಶೇಖರ ಮತ್ತು ಈತನ ಪತ್ನಿಯಾದ ವಸಂತ ಮತ್ತು ಶಿವಕುಮಾರ ಹಾಗೂ ಈತನ ಪತ್ನಿ ರಾಧಮಣಿ ಇವರುಗಳೆಲ್ಲರೂ 2017ರಂದು ನಮ್ಮ ಜಮೀನಿಗೆ ಹಾಕಿದ್ದ ರಾಗಿಯನ್ನು, ದನ ಕರುಗಳನ್ನು ಬಿಟ್ಟು ಮೇಯಿಸಿ ಬೆಳೆ ಹಾನಿ ಮಾಡಿದ್ದರು. ಈ ವಿಚಾರವಾಗಿ ಅವರನ್ನು ಕೇಳಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿ ಹೊಡೆದು ಜಾತಿ ನಿಂದನೆ ಮಾಡಿರುತ್ತಾರೆ ಎಂದು ದೂರಿದರು.
ಈ ವಿಚಾರವಾಗಿ ಕೇಸು ದಾಖಲಾಗಿ ದಾವೆ ನ್ಯಾಯಾಲಯದಲ್ಲಿದ್ದರೂ ಕೂಡ ಸುಮ್ಮನಿರದೆ 2023 ಮಾರ್ಚ್ ತಿಂಗಳ ಸಂಜೆ 4.30ರ ಸಮಯದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಚಂದ್ರಶೇಖರ, ಶಿವಕುಮಾರ, ವಸಂತ ಹಾಗೂ ರಾಧಮಣಿ ಇವರುಗಳೆಲ್ಲರೂ ಸೇರಿಕೊಂಡು ಜಮೀನಿನ ಶೀಟ್ ಸೆಡ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಅದರಲ್ಲಿ ಇದ್ದಂತಹ ಚಾಪೆ, ದಿಂಬು ಹಾಗೂ ಪಾತ್ರೆ ಪರಿಕರಗಳು, ಟಾರ್ಪಾಲ್‌ಗಳು ಹಾಗೂ ಇನ್ನಿತರ ವ್ಯವಸಾಯದ ಸಾಮಗ್ರಿಗಳನ್ನು ಸುಟ್ಟು ಹಾಕಿರುತ್ತಾರೆ ಎಂದು ಆರೋಪಿಸಿದರು.
ಆ ಸಮಯದಲ್ಲಿ ಭಾಗ್ಯ ಹಾಗೂ ರಂಗಸ್ವಾಮಿಯವರು ಮಗಳ ಮನೆಗೆ ಹೋಗಿದ್ದರಿಂದ ಯಾವುದೇ ಜೀವಹಾನಿ ಆಗಿರುವುದಿಲ್ಲ. ನಂತರ ಹೋಗಿ ನೋಡಿದಾಗ ಎಲ್ಲಾ ಸುಟ್ಟು ಹೋಗಿರುತ್ತದೆ. ಈ ವಿಚಾರವಾಗಿ ಹಳೇಬೀಡು ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಸಹ ಆರೋಪಿಗಳ ಮೇಲೆ ಯಾವುದೇ ಕ್ರಮವನ್ನು ಇದುವರೆಗೂ ತೆಗೆದುಕೊಳ್ಳದೆ ಮತ್ತು ಅವರನ್ನು ಬಂಧಿಸಿರುವುದಿಲ್ಲ ಎಂದರು. ಸಂಬಂಧಪಟ್ಟ ತನಿಖಾಧಿಕಾರಿಗಳಾದ ಅರಸೀಕೆರೆಯ ಡಿ.ವೈ.ಎಸ್.ಪಿ ರವರು ಹಾಗೂ ಹಳೇಬೀಡು ಪೊಲೀಸ್ ಠಾಣಾ ಇಲಾಖೆಯವರು ಕ್ರಮ ತೆಗೆದುಕೊಂಡಿರುವುದಿಲ್ಲ ಹಾಗೂ ಭಾಗ್ಯ ಮತ್ತು ರಂಗಸ್ವಾಮಿ ರವರುಗಳಿಗೆ ಪ್ರಾಣ ಭಯ ಇರುವುದರಿಂದ ಕೂಡಲೇ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ವೇಳೇ ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ ರಮೇಶ್, ತಾಲೂಕು ಅಧ್ಯಕ್ಷ ಮಂಜಯ್ಯ, ಉಪಾಧ್ಯಕ್ಷ ಉಮೇಶ್ ಇತರರು ಉಪಸ್ಥಿತರಿದ್ದರು.