ಚನ್ನರಾಯಪಟ್ಟಣ: ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕೃಷಿ ಸಾಲ ವಸೂಲಾತಿ ಪದ್ಧತಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಯುತ್ತಿರುವ ಧರಣೆ ಸತ್ಯಾಗ್ರಹ ಮಾ. 29ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಆರ್. ಮಾಧವ ರೆಡ್ಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ.೬ ರಂದು ಬಳ್ಳಾರಿಯಿಂದ ಧರಣಿ ಸತ್ಯಾಗ್ರಹ ಯಾತ್ರೆಯು ಹೊರಟಿದ್ದು ಸಮಾರೋಪ ಸಮಾರಂಭವು ಮಾ.೨೯ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿದೆ ಎಂದರು.
ರಾಜ್ಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ 28 ಶಾಖೆಗಳು ಇದ್ದು, ಬಹುತೇಕ ರೈತರು ಕಾವೇರಿ ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ. ಉದಯಪುರ ಕಾವೇರಿ ಗ್ರಾಮೀಣ ಬ್ಯಾಂಕಿನಿಂದ ಏಳು ವರ್ಷ ಅವಧಿಯಲ್ಲಿ ಸಾಲ ಪಡೆದು ರೈತರು ಟ್ರ್ಯಾಕ್ಟರ್ ಖರೀದಿ ಮಾಡಿದ್ದಾರೆ. ಇದೀಗ ಸುಮಾರು ೩೨ ಲಕ್ಷ ರೂಪಾಯಿ ಬಡ್ಡಿ ಸಮೇತ ವಸೂಲಿ ಮಾಡಲು ಬ್ಯಾಂಕಿನವರು ಮುಂದಾಗಿದ್ದಾರೆ. ಈ ಹಣವನ್ನು ಬ್ಯಾಂಕಿಗೆ ಕಟ್ಟಲು ಬಿಡುವುದಿಲ್ಲ ಎಂದು ಹೇಳಿದ ಹರಳಾಪುರದ ಮಂಜೇಗೌಡ ಅವರು ಅಸಲು ಹಣದಲ್ಲಿ 50% ಕಡಿತ ಮಾಡಿದರೆ ಹಣ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸಾವಿರಾರು ರೈತರನ್ನು ಸೇರಿಸಿ ಕಾವೇರಿ ಗ್ರಾಮೀಣ ಬ್ಯಾಂಕಿನ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು. ರಾಜ್ಯದಲ್ಲಿ ಕೊಬ್ಬರಿ ಬೆಲೆಯೂ ಕ್ಚಿಂಟಾಲ್ 9000 ಇಳಿದಿದ್ದು ಇದರ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರಕಾರಗಳು ಏನು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರು ಉಪಸ್ಥಿತರಿದ್ದರು.