ಹಾಸನ: ಪ್ರಸ್ತುತ ದಿನಗಳಲ್ಲಿ ಕೆಲ ಬಣ್ಣಗಳಿಗೆ ಶುಭ ಮತ್ತು ಅಶುಭದ ಸಂಕೇತ ಎಂದು ಬಿಂಬಿಸಿ ಮಕ್ಕಳಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡಲಾಗುತ್ತಿದ್ದು, ಇದು ತಪ್ಪು ಕಲ್ಪನೆ ಆಗಿದೆ ಎಂದು ಚಿತ್ರ ಕಲಾವಿದ ಬಿ.ಎಸ್ ದೇಸಾಯಿ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಹೊಯ್ಸಳ ಚಿತ್ರಕಲಾ ಪರಿಷತ್, ಸಂಸ್ಕಾರ ಭಾರತಿ, ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕಲಾ ದಿನದ ಅಂಗವಾಗಿ ನಡೆದ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ವಿವಿಧ ಬಣ್ಣಗಳು ಮಾನವನನ್ನು ಆಕರ್ಷಿಸುವ ಜೊತೆಗೆ ಅವರು ಆಸ್ವಾದಿಸುವ ಮನೋಭಾವನೆ ಹೊಂದಿರುತ್ತಾರೆ, ಆದರೆ ಕೆಲವು ಬಣ್ಣಗಳಿಗೆ ಶುಭ ಹಾಗೂ ಅಶುಭದ ಸಂಕೇತ ಬಿಂಬಿಸಿ ಮಕ್ಕಳಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿರುವುದು ತಪ್ಪು ಕಲ್ಪನೆ ಎಂದರು.
ಬಾಲ್ಯದಲ್ಲಿ ಮಕ್ಕಳ ಎಲ್ಲ ಚಟುವಟಿಕೆಗಳು ನೋಡುಗರಿಗೆ ಸುಂದರವಾಗಿಯೇ ಕಾಣುತ್ತವೆ. ಬಾಲ್ಯದಲ್ಲೇ ಅವರಿಗೆ ಬಣ್ಣಗಳ ಬಗ್ಗೆ ಶುಭ ಹಾಗೂ ಆಶುಭದ ಸಂಕೇತ ಬಿಂಬಿಸುವುದು ಬೇಡ. ಕಲಾ ಸ್ಪರ್ಧೆ ಹಾಗೂ ಪ್ರದರ್ಶನಗಳನ್ನು ಮಾಡುವುದರಿಂದ ಮಕ್ಕಳಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ ಈ ನಿಟ್ಟಿನಲ್ಲಿ ಯಾವುದೇ ಪ್ರತಿಭೆ ಹೊರ ಹೊಮ್ಮಬೇಕಾದರೆ ಸ್ಪರ್ಧೆಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ.ಎಂ ಹರೀಶ್ ಮಾತನಾಡಿ, ವೇದಿಕೆ ಸಿಕ್ಕಾಗ ಮಾತ್ರ ನಮ್ಮೊಳಗಿನ ವ್ಯಕ್ತಿತ್ವ ವಿಕಸನ ಹಾಗೂ ತಮ್ಮೊಳಗಿನ ಪ್ರತಿಭೆ ಪ್ರದರ್ಶಿಸಲು ಸಾಧ್ಯ, ಆದುದರಿಂದ ಬೇರೆ ಜಿಲ್ಲೆಗಳಿಗೆ ಹೋಗಿ ತಮ್ಮ ಪ್ರತಿಭೆ ಪ್ರದರ್ಶಿಸುವ ಬದಲಾಗಿ ನಮ್ಮ ಜಿಲ್ಲೆಯಲ್ಲೇ ಇಂತಹ ವೇದಿಕೆ ಸೃಷ್ಟಿ ಮಾಡಿಕೊಟ್ಟಿರುವ ಹೊಯ್ಸಳ ಚಿತ್ರಕಲಾ ಪರಿಷತ್ ನ ಕಾರ್ಯ ಶ್ಲಾಘನೀಯ. ನಮ್ಮ ಜಿಲ್ಲೆಯಲ್ಲಿನ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಚಿತ್ರಕಲಾ ಪರಿಷತ್ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಅದೇ ರೀತಿ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಮಾಡಲಿ ಎಂದು ಹೇಳಿದರು.
ಮಕ್ಕಳಲ್ಲಿ ಇರುವ ಪ್ರತಿಭೆ ಕೆಲವೊಮ್ಮೆ ಪೋಷಕರಿಗೂ ಗೊತ್ತಿರುವುದಿಲ್ಲ, ಅವುಗಳನ್ನು ಹೊರ ತರುವ ಕೆಲಸವನ್ನು ಅನೇಕ ಕಿರುತೆರೆಯ ಕಾರ್ಯಕ್ರಮಗಳು ಮಾಡಿಕೊಂಡು ಬಂದಿವೆ. ಅದೇ ರೀತಿ ಹೊಯ್ಸಳ ಚಿತ್ರಕಲಾ ಪರಿಷತ್ ಕೂಡ ಚಿತ್ರಕಲೆ ಪ್ರದರ್ಶನಕ್ಕೆ ಜಿಲ್ಲೆಯ ಜನರಿಗೆ ಅವಕಾಶ ಒದಗಿಸಿ ಅವರಿಗೆ ಪ್ರೋತ್ಸಾಹಿಸುತ್ತಾ ಬಂದಿದೆ. ಅವರ ಜೊತೆ ಎಲ್ಲರೂ ನಿಲ್ಲುವ ಮೂಲಕ, ಚಿತ್ರಕಲೆಗೆ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದರು.
ಹೊಯ್ಸಳ ಚಿತ್ರಕಲಾ ಪರಿಷತ್ ನ ಅಧ್ಯಕ್ಷ ಶಂಕರಪ್ಪ ಮಾತನಾಡಿ, ವಿಶ್ವ ಕಲಾವಿದರ ದಿನವನ್ನು ಕಳೆದ 6 ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಮಾಡಲಾಗುವುದು ಎಂದರು. ಸ್ಪರ್ಧೆಯಲ್ಲಿ ಅನೇಕ ವಿಧ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದು, ಬಹುಮಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ಚಿತ್ರ ಬರೆದು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಬಿ.ರವಿ, ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಮೇಶ ಹೆಚ್ ಎಂ., ಖಜಾಂಚಿ ಟಿ.ಎನ್.ಲಿಂಗರಾಜ, ಶಿವಕುಮಾರ, ಚಿತ್ರಕಲಾ ಶಿಕ್ಷಕ ವೈ.ಹೆಚ್ ಜಯರಾಂ ಇತರರು ಉಪಸ್ಥಿತರಿದ್ದರು.